– ತಮಿಳುನಾಡು – ಕಾಶಿ ನಡುವಿನ ಸಾಂಸ್ಕೃತಿಕ ಸಂಬಂಧ ಬೆಸೆಯುವ ಉದ್ದೇಶ
ವಾರಾಣಸಿ: ತಮಿಳುನಾಡು ಮತ್ತು ಕಾಶಿ ನಡುವಿನ ಶತಮಾನಗಳ ಇತಿಹಾಸ ಹೊಂದಿರುವ ಸಾಂಸ್ಕೃತಿಕ, ಭಾಷಿಕ ಹಾಗೂ ನಾಗರಿಕತೆಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಐದನೇ ಆವೃತ್ತಿಯ `ಕಾಶಿ ತಮಿಳು ಸಂಗಮಂ 5.0′ (Kashi Tamil Sangamam 5.0) ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ.
ನವೆಂಬರ್ 28ರಿಂದ ಡಿಸೆಂಬರ್ 12ರವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (C. P. Radhakrishnan) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಇದನ್ನೂ ಓದಿ: ಪಾರ್ಕ್ ಜಾಗವನ್ನೇ ಸೈಟ್ ಮಾಡಿ ಖಾಸಗಿಯವರಿಗೆ ಖಾತೆ ಮಾಡಿದ್ದ ಪಿಡಿಒ ಸಸ್ಪೆಂಡ್!
ವಾರಾಣಸಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಮಾಧ್ಯಮ ಪ್ರತಿನಿಧಿಗಳು, ಕೃಷಿ ಕ್ಷೇತ್ರದವರು, ಕುಶಲಕರ್ಮಿಗಳು, ಮಹಿಳೆಯರು ಹಾಗೂ ಆಧ್ಯಾತ್ಮಿಕ ನಾಯಕರು ಸೇರಿದಂತೆ ಸುಮಾರು 1,400 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಈ ಪೈಕಿ 200 ಮಂದಿ ಈಗಾಗಲೇ ವಾರಾಣಸಿ ತಲುಪಿದ್ದಾರೆ.
ಈ ಬಾರಿಯ ಸಂಗಮದ ಮುಖ್ಯ ವಿಷಯ `ತಿರುಕ್ಕುರಳ್ ಪಯಿಲ್ವೋಮ್ – ತಿರುಕ್ಕುರಳ್ ಅಭ್ಯಾಸ ಕರೇನ್’ (ತಿರುಕ್ಕುರಳ್ ಕಲಿಯೋಣ) ಎಂಬುದಾಗಿದೆ. ತಮಿಳು ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ರಚಿಸಿರುವ ತಿರುಕ್ಕುರಳ್ನ 1,330 ದ್ವಿಪದಿಗಳಲ್ಲಿರುವ ನೈತಿಕತೆ, ಆಡಳಿತ, ಮಾನವ ಸಂಬಂಧ, ಕರುಣೆ ಮತ್ತು ಶಿಸ್ತಿನ ಮೌಲ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಕಾರ್ಯಕ್ರಮದ ಅಂಗವಾಗಿ ದೇಶದ 1,000 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಿರುಕ್ಕುರಳ್ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮಾರ್ಗಸೂಚಿಗಳ ಪ್ರಕಾರ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.
ಇದಲ್ಲದೆ, ತಮಿಳುನಾಡಿನ 50 ಶಿಕ್ಷಕರು ಉತ್ತರ ಪ್ರದೇಶದ ಶಾಲೆಗಳಿಗೆ ಭೇಟಿ ನೀಡಿ ತಿರುಕ್ಕುರಳ್ ಬೋಧಿಸಲಿದ್ದಾರೆ. ವಾರಾಣಸಿಯಲ್ಲಿ ಓದು, ಕಥೆ ಹೇಳುವಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ವಿಚಾರ ಸಂಕಿರಣ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವೂ ನಡೆಯಲಿದೆ.
ಡಿಸೆಂಬರ್ 12ರವರೆಗೆ ನಡೆಯುವ ಸಂಗಮದಲ್ಲಿ ಪ್ರತಿನಿಧಿಗಳು ವಾರಾಣಸಿ, ಪ್ರಯಾಗ್ರಾಜ್ ಮತ್ತು ಅಯೋಧ್ಯೆಯ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ, ಕಾಶಿ ತಮಿಳುನಾಡು ಪರಂಪರೆಯನ್ನು ಮುಚ್ಚಿ ಹಾಕುವ ಕೆಲಸ ಸುಡೋ ಸೆಕ್ಯುಲರ್ಗಳು ಮಾಡುತ್ತಿದ್ದರು. ಅದಕ್ಕಾಗಿ ಪ್ರಧಾನಿ ಮೋದಿ ಈ ಕಾರ್ಯಕ್ರಮ ಪರಿಚಯಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಮ್ಮ ಪರಂಪರೆಯನ್ನು ಯುವ ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಕಾರು – 7 ಮಂದಿ ಸಾವು, ಐವರಿಗೆ ಗಾಯ



