ಬಾಲಿವುಡ್ನ ಬಹುನಿರೀಕ್ಷಿತ ‘ಕಿಂಗ್’ ಚಿತ್ರದ (King Movie) ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ತು ಮಿಲ್ ಜಾಯೆ’ ಹಾಡಿನಲ್ಲಿ ತಮ್ಮ ರೊಮ್ಯಾಂಟಿಕ್ ಹಾಗೂ ಆಕ್ಷನ್ ಅವತಾರಗಳ ಮೂಲಕ ಮೋಡಿ ಮಾಡಿದ್ದ ಶಾರುಖ್ ಖಾನ್ (Shah Rukh Khan), ಇದೀಗ ಚಿತ್ರದ ಹೊಸ ಪೆಪ್ಪಿ ಗೀತೆ ‘ಡ್ಯಾಡಿ ಕೂಲ್ (ಕಿಂಗ್ ವರ್ಷನ್)’ (Daddy Cool) ಮೂಲಕ ಮನರಂಜನೆಯ ಕಿಚ್ಚು ಹಚ್ಚಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ಈ ಹಾಡಿನಲ್ಲಿ ನಟಿ ಕರೀನಾ ಕಪೂರ್ ಖಾನ್ (Kareena Kapoor) ವಿಶೇಷವಾಗಿ ಕಾಣಿಸಿಕೊಂಡಿದ್ದು, ಹಿಂದಿ ಚಿತ್ರರಂಗದ ಈ ಎವರ್ಗ್ರೀನ್ ಜೋಡಿ ಬರೋಬ್ಬರಿ 15 ವರ್ಷಗಳ ಸುದೀರ್ಘ ವಿರಾಮದ ನಂತರ ಒಂದೇ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಸಿನಿಪ್ರಿಯರಿಗೆ ರಸದೌತಣ ನೀಡಿದೆ.
ಆಕರ್ಷಕ ಬೀಟ್ಗಳು, ಕಿವಿಗಿಂಪಾದ ಲಯ ಮತ್ತು ರೆಟ್ರೋ ಶೈಲಿಯೊಂದಿಗೆ ಮೂಡಿಬಂದಿರುವ ‘ಡ್ಯಾಡಿ ಕೂಲ್ (ಕಿಂಗ್ ವರ್ಷನ್)’, ಜಾಗತಿಕ ಮಟ್ಟದಲ್ಲಿ ಹಿಟ್ ಆಗಿದ್ದ ಬೋನಿ ಎಂ. ಅವರ ವಿಶ್ವವಿಖ್ಯಾತ ‘ಡ್ಯಾಡಿ ಕೂಲ್’ ಹಾಡಿನ ರೀಕ್ರಿಯೇಟೆಡ್ ವರ್ಷನ್ ಆಗಿದೆ. ಫ್ರಾಂಕ್ ಫರಿಯನ್ ಮತ್ತು ಜಾರ್ಜ್ ರೇಯಮ್ ಬರೆದ ಮೂಲ ಹಾಡಿನ ಸತ್ವವನ್ನು ಉಳಿಸಿಕೊಂಡು, ಸಂಗೀತ ನಿರ್ದೇಶಕ ಜೋಡಿ ಸಚಿನ್-ಜಿಗರ್ ಇದಕ್ಕೆ ಹೊಸ ಬಾಲಿವುಡ್ ಟಚ್ ನೀಡಿದ್ದಾರೆ. ಹಾಡಿನಲ್ಲಿ ಶಾರುಖ್ ಖಾನ್ ತಮ್ಮದೇ ಆದ ವಿಶಿಷ್ಟ ಚಾರ್ಮ್ ಹಾಗೂ ಕ್ಲಾಸಿಕ್ ಶೈಲಿಯೊಂದಿಗೆ ಮಿಂಚಿದ್ದರೆ, ಕರೀನಾ ಕಪೂರ್ ತಮ್ಮ ಸ್ಟೈಲಿಶ್ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಡ್ಯಾನ್ಸ್ ಫ್ಲೋರ್ನಲ್ಲಿ ಧೂಳೆಬ್ಬಿಸಿದ್ದಾರೆ. ಇದನ್ನೂ ಓದಿ: ಮಹಾನ್ ಚಿತ್ರದ ಅನ್ನದಾತರ ಬದುಕಿಗೆ ಧ್ವನಿಯಾದ ‘ನಾನೇ ನಾನೇ ರೈತ’ ಸಾಂಗ್ ರಿಲೀಸ್
ರಾಷ್ಟ್ರಪ್ರಶಸ್ತಿ ವಿಜೇತ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಶಿಲ್ಪಾ ರಾವ್ ತಮ್ಮ ಧ್ವನಿಯ ಮೂಲಕ ಹಾಡಿಗೆ ಮತ್ತಷ್ಟು ಲವಲವಿಕೆ ತುಂಬಿದ್ದಾರೆ. ಕುಮಾರ್ ಅವರ ಹಿಂದಿ ಸಾಹಿತ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕಿ ವೈಭವಿ ಮರ್ಚೆಂಟ್ ಅವರ ಎನರ್ಜಿಟಿಕ್ ಕೊರಿಯೋಗ್ರಫಿ ಈ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಮೆಟಾ ಸಂಸ್ಥೆಯ ಪ್ರತಿಷ್ಠಿತ ಕಾರ್ಯಕ್ರಮವಾದ ‘ಹೌಸ್ ಆಫ್ ಇನ್ಸ್ಟಾಗ್ರಾಮ್ 2026’ ವೇದಿಕೆಯಲ್ಲಿ ದೇಶದ 700ಕ್ಕೂ ಹೆಚ್ಚು ಪ್ರಮುಖ ಕಂಟೆಂಟ್ ಕ್ರಿಯೇಟರ್ಗಳ ಸಮ್ಮುಖದಲ್ಲಿ ಈ ಹಾಡನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಯಿತು. ಸದ್ಯ ಈ ಗೀತೆಯು ಜೀ ಮ್ಯೂಸಿಕ್ ಕಂಪನಿ ಮತ್ತು ಟಿ-ಸೀರೀಸ್ ಯೂಟ್ಯೂಬ್ ಚಾನೆಲ್ಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
2023ರಲ್ಲಿ ಬಿಡುಗಡೆಯಾದ ‘ಡಂಕಿ’ ಚಿತ್ರದ ಬಳಿಕ ಶಾರುಖ್ ಖಾನ್ ಮತ್ತೆ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಚಿತ್ರವನ್ನು ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಹಾಗೂ ಸಿದ್ಧಾರ್ಥ್ ಮತ್ತು ಮಮತಾ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಚಿತ್ರದಲ್ಲಿ ಶಾರುಖ್ ಜೊತೆಗೆ ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಕರೀನಾ ಕಪೂರ್, ರಾಣಿ ಮುಖರ್ಜಿ ಹಾಗೂ ದೀಪಿಕಾ ಪಡುಕೋಣೆ ಅತಿಥಿ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಕ್ರಿಸ್ಮಸ್ ವಿಶೇಷವಾಗಿ 2026ರ ಡಿಸೆಂಬರ್ 24ರಂದು ‘ಕಿಂಗ್’ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಶಾರುಖ್-ಕರೀನಾ ಜೋಡಿಯ ಮೋಡಿ ಮತ್ತೊಮ್ಮೆ ಬಾಕ್ಸ್ ಆಫೀಸ್ನಲ್ಲಿ ಜಾದೂ ಮಾಡಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಇದನ್ನೂ ಓದಿ: ‘ಕುರುಡು ಕಾಂಚಾಣ’ ಚಿತ್ರದ ಸಾಂಗ್ ರಿಲೀಸ್ ಮಾಡಿದ ಜಗ್ಗೇಶ್ ಪತ್ನಿ ಪರಿಮಳಾ
