ಬೆಂಗಳೂರು: ಆಶಾ ಕಾರ್ಯಕರ್ತೆಯರ (Asha Workers) ಹೋರಾಟ ತೀವ್ರಗೊಂಡಿದೆ. ಸಿಎಂ ಲಿಖಿತ ಭರವಸೆ ಕೊಡಲ್ಲ ಅಂದ್ಮೆಲೂ ಹೋರಾಟದಿಂದ ಹಿಂದೆ ಸರಿಯಲ್ಲ ಅಂತ ಬಿಗಿಪಟ್ಟು ಹಿಡಿದಿದ್ದಾರೆ. ಇಂದು ಹನ್ನೆರಡನೇ ದಿನವೂ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರೆಸಿದ್ದಾರೆ. ಇದರ ನಡುವೆ ಮನವೊಲಿಕೆಗೆ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಆರೋಗ್ಯ ಸಚಿವ ಯುಟಿ ಖಾದರ್ (UT Khader) ಮುಂದಾಗಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆಯು 12ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದೊಂದಿಗಿನ ಸಂಧಾನ ವಿಫಲವಾದ ಹಿನ್ನೆಲೆ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಇಂದು ಸಿಎಂ ನಮ್ಮ ಜೊತೆ ಮಾತನಾಡಿ, ಸಕಾರಾತ್ಮಕ ಭರವಸೆ ಕೊಡಬಹುದೆಂಬ ನೀರಿಕ್ಷೆಯಲ್ಲಿ AICTUಮುಖಂಡರಿದ್ದು, ಸಿಎಂ ಬುಲಾವ್ಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಸೇವೆ ಕಡೆಗಣಿಸುವ ಉದ್ದೇಶವಿಲ್ಲ: ಯು.ಟಿ ಖಾದರ್ ಸ್ಪಷ್ಟನೆ
ಇತ್ತ ಆಶಾ ಕಾರ್ಯಕರ್ತೆಯರ ಮನವೊಲಿಕೆಗೆ ಆರೋಗ್ಯ ಸಚಿವರ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಮುಂದಾಗಿದ್ದು, ಆಶಾ ಸಂಘಟನೆ ಮುಖಂಡರಿಗೆ ಮತ್ತೆ ಯು.ಟಿ. ಖಾದರ್ ಬುಲಾವ್ ನೀಡಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಆರೋಗ್ಯ ಸಚಿವರ ನಿವಾಸದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಹಾಗೂ 10 ಮಂದಿ ಆಶಾ ಕಾರ್ಯಕರ್ತೆಯರು ಭಾಗಿಯಾಗಲಿದ್ದಾರೆ.
ಕಳೆದ ಶನಿವಾರವೂ ಆಶಾ ಕಾರ್ಯಕರ್ತೆಯರ ಜೊತೆ ಸಚಿವ ಯು.ಟಿ. ಖಾದರ್ ಅವರು ಸಭೆ ನಡೆಸಿದ್ದರು. ಆದರೆ ಹಿಂದಿನ ಸಭೆಯ ಬಳಿಕವೂ ಆಶಾಗಳ ಹೋರಾಟ ಮುಂದುವರಿದಿದ್ದು, ಇಂದಿನ ಸಭೆಯಲ್ಲಾದರೂ ಬೇಡಿಕೆಗಳಿಗೆ ಪರಿಹಾರ ಸಿಗುತ್ತಾ? ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತೆರೆ ಬೀಳುತ್ತಾ? ಎಂದು ಸಭೆ ಬಳಿಕ ತಿಳಿಯಬೇಕಿದೆ.ಇದನ್ನೂ ಓದಿ: ಆಶಾ ಕಾರ್ಯಕರ್ತೆಯರು ಮೊಂಡುತನ ಬಿಟ್ಟು ಕಾಲಾವಕಾಶ ಕೊಡಿ, ಲಿಖಿತ ಭರವಸೆ ಕೊಡಲು ಆಗಲ್ಲ: ಹೆಚ್.ಸಿ ಬಾಲಕೃಷ್ಣ
ಇನ್ನೂ ಪ್ರತಿಭಟನೆಯನ್ನ ಕೈ ಬಿಡುವಂತೆ ಸಿಎಂ ಡಿಕೆ ಶಿವಕುಮಾರ್ ವಿನಂತಿಸಿದ್ದಾರೆ. ಸರ್ಕಾರವು ಆಶಾ ಕಾರ್ಯಕರ್ತೆಯರ ಪರವಾಗಿದೆ. ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ನಾನು ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ, ಇದೇನು ಕಾಂಟ್ರಾಕ್ಟ್ ಅಲ್ಲ ಎಂದು ಹೇಳಿದ್ದಕ್ಕೆ ಆಶಾ ಕಾರ್ಯಕರ್ತೆಯರು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಕರೆದು ಮಾತಾನಾಡುವ ತನಕ ಇಲ್ಲಿಂದ ಕದಲಲ್ಲ ಅಂತ ಬಿಗಿಪಟ್ಟು ಹಿಡಿದಿರುವ ಆಶಾ ಕಾರ್ಯಕರ್ತೆಯರು ಹನ್ನೆರೆಡನೇ ದಿನವೂ ಹೋರಾಟ ಮುಂದುವರೆಸಲಿದ್ದಾರೆ.
ಕಳೆದ ಹನ್ನೊಂದು ದಿನಗಳಿಂದ ಮಳೆ ಮತ್ತು ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಮಹಿಳೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನಂತಹ ಕನಿಷ್ಠ ಮೂಲಸೌಕರ್ಯಗಳ ಕೊರತೆಯಿದ್ದು, ನಿರಂತರ ಹೋರಾಟದಿಂದಾಗಿ 20ಕ್ಕೂ ಹೆಚ್ಚು ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದಾರೆ. ಸರ್ಕಾರ ಲಿಖಿತ ಭರವಸೆ ನೀಡುವ ಯೋಚನೆಯಲ್ಲಿಲ್ಲ. ಆಶಾಗಳು ತಮ್ಮ ಪಟ್ಟು ಬಿಡುತ್ತಿಲ್ಲ. ಇನ್ನೆಷ್ಟು ದಿನ ಆಶಾ ಕಾರ್ಯಕರ್ತೆಯರು ಹೋರಾಟ ಮುಂದುವರೆಸಲಿದ್ದಾರೆ ಅಂತ ಕಾದು ನೋಡಬೇಕಿದೆ.ಇದನ್ನೂ ಓದಿ: ಕೆಲವರು ರಾಜಕೀಯ ಮಾಡ್ತಿದ್ದಾರೆ, ಲಿಖಿತ ಭರವಸೆ ಕೊಡಲು ಸಾಧ್ಯವಿಲ್ಲ – ಸಿಎಂ ಡಿಕೆಶಿ ಖಡಕ್ ಹೇಳಿಕೆ
