ನವದೆಹಲಿ: ಪಾಕಿಸ್ತಾನದ(Pakistan) ವಶದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಭೂಭಾಗವು(PoK) ಆಕ್ರಮಣದಿಂದ ಮುಕ್ತವಾದಾಗ, ಆ ಪ್ರದೇಶದ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ (Delimitation) ನಡೆಸಲು ಭಾರತೀಯ ಚುನಾವಣಾ ಆಯೋಗವೇ ‘ಕ್ಷೇತ್ರ ಪುನರ್ವಿಂಗಡಣೆ ಆಯೋಗ’ವಾಗಿ (Delimitation Commission) ಕಾರ್ಯನಿರ್ವಹಿಸಲಿದೆ.
ಕೇಂದ್ರ ಸರ್ಕಾರವು ಮಂಡಿಸಲು ಸಿದ್ಧತೆ ನಡೆಸಿರುವ ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಮಸೂದೆಯ ಕರಡಿನಲ್ಲಿ ಈ ವಿಶೇಷ ಉಪಬಂಧವನ್ನುಸೇರಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಈಗಾಗಲೇ 24 ಸ್ಥಾನಗಳನ್ನು ಮೀಸಲಿಡಲಾಗಿದೆ. ಭವಿಷ್ಯದಲ್ಲಿ ಈ ಪ್ರದೇಶವು ಭಾರತದ ನಿಯಂತ್ರಣಕ್ಕೆ ಬಂದಾಗ ಅಲ್ಲಿ ಚುನಾವಣೆ ನಡೆಸಲು ಕ್ಷೇತ್ರಗಳನ್ನು ಹೇಗೆ ವಿಂಗಡಿಸಬೇಕು ಎಂಬುದಕ್ಕೆ ಈ ಕಾನೂನು ಸ್ಪಷ್ಟ ದಾರಿ ಮಾಡಿಕೊಡುತ್ತದೆ.
ಸಾಮಾನ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಗಾಗಿ ಪ್ರತ್ಯೇಕ ಆಯೋಗವನ್ನು ರಚಿಸಲಾಗುತ್ತದೆ. ಆದರೆ ಪಿಒಕೆ ವಿಚಾರದಲ್ಲಿ ಯಾವುದೇ ವಿಳಂಬವಾಗದಂತೆ ತಡೆಯಲು ಆ ಪ್ರದೇಶ ಮುಕ್ತವಾದ ತಕ್ಷಣವೇ ಕ್ಷೇತ್ರಗಳನ್ನು ಗುರುತಿಸುವ ಸಂಪೂರ್ಣ ಅಧಿಕಾರವನ್ನು ನೇರವಾಗಿ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನೀಡಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬ ತನ್ನ ನಿಲುವನ್ನು ಕೇಂದ್ರ ಸರ್ಕಾರ ಈ ಕಾನೂನಿನ ಮೂಲಕ ಮತ್ತೊಮ್ಮೆ ಗಟ್ಟಿಯಾಗಿ ಪ್ರತಿಪಾದಿಸಿದೆ. ಇದನ್ನೂ ಓದಿ: ಲೋಕಸಭೆಗೆ 850, ವಿಧಾನಸಭೆಗೆ 650 ಗರಿಷ್ಠ ಮಿತಿ – ಕ್ಷೇತ್ರ ಪುನರ್ವಿಂಗಡಣೆ ಮಸೂದೆಯಲ್ಲಿ ಏನಿದೆ?
2019ರ ಕಾಯ್ದೆಯಲ್ಲಿ ಏನಿತ್ತು?
ಸಂವಿಧಾನದ 370 ಮತ್ತು 35A ವಿಧಿಗಳ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಭಾರತದ ಸಂಸತ್ತು 2019 ರಲ್ಲಿ ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳ ಮರುವಿಂಗಡಣಾ ಮಸೂದೆಯನ್ನು ಅಂಗೀಕರಿಸಿತ್ತು. ಆಗಸ್ಟ್ 9, 2019 ರಂದು ಈ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕುವ ಮೂಲಕ ಕಾಯ್ದೆಯಾಗಿ ಜಾರಿಯಾಗಿತ್ತು.
ಈ ಕಾಯ್ದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು.
ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ): ಇದು ಪುದುಚೇರಿಯ ಮಾದರಿಯಲ್ಲಿ ತನ್ನದೇ ಆದ ವಿಧಾನಸಭೆಯನ್ನು ಹೊಂದಿದೆ.
ಲಡಾಖ್ (ಕೇಂದ್ರಾಡಳಿತ ಪ್ರದೇಶ): ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳನ್ನು ಒಳಗೊಂಡಿರುವ ಈ ಪ್ರದೇಶವು ಚಂಡೀಗಢದ ಮಾದರಿಯಲ್ಲಿ ವಿಧಾನಸಭೆಯನ್ನು ಹೊಂದಿಲ್ಲ. ಇದನ್ನು ನೇರವಾಗಿ ಲೆಫ್ಟಿನೆಂಟ್ ಗವರ್ನರ್ ಆಳುತ್ತಾರೆ
ಕ್ಷೇತ್ರ ಪುನರ್ವಿಂಗಡಣೆ (Delimitation) ಮತ್ತು ನಂತರದ ತಿದ್ದುಪಡಿಗಳ ಅನ್ವಯ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಒಟ್ಟು ಚುನಾಯಿತ ಸ್ಥಾನಗಳ ಸಂಖ್ಯೆಯನ್ನು 90ಕ್ಕೆ ನಿಗದಿಪಡಿಸಿದ್ದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ 24 ಸ್ಥಾನಗಳನ್ನು ಮೀಸಲಿಡಲಾಗಿದೆ. 2024 ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆಗಳು ನಡೆದು ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
