ಚೆನ್ನೈ: ಕಲ್ಲಕುರಿಚಿ ಜಿಲ್ಲಾಧಿಕಾರಿ ಜೆ.ಇ. ಪದ್ಮಜಾ(J E Padmaja) ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ (TVK) ಶಾಸಕ ಸಿ. ಅರುಳ್ ವಿಘ್ನೇಶ್(Arul Vignesh) ಅವರನ್ನು ಬಂಧಿಸಲಾಗಿದೆ.
ಮಹಿಳಾ ಐಎಎಸ್ ಅಧಿಕಾರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿ, ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಈ ವಿವಾದ ಭುಗಿಲೆದ್ದಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಪದ್ಮಜಾ ಅವರು ನವೆಂಬರ್ 23 ರಂದು ಕಲ್ಲಕುರಿಚಿ ಪೊಲೀಸ್ ವರಿಷ್ಠಾಧಿಕಾರಿ ಶಹನಾಜ್ ಐ ಅವರಿಗೆ ಅಧಿಕೃತ ದೂರು ನೀಡಿದ್ದರು. ದೂರಿನ ಅನ್ವಯ ಕಲ್ಲಕುರಿಚಿ ಮಹಿಳಾ ಪೊಲೀಸರು ಶಾಸಕರ ವಿರುದ್ಧ ಐದು ಕಾನೂನು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಡಿಎಂಕೆ ಸಂಸದೆ ಕನಿಮೊಳಿ ಕರುಣಾನಿಧಿ ಅವರು ಈ ಆರೋಪಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ ನಂತರ, ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ರಾಷ್ಟ್ರೀಯ ಮಹಿಳಾ ಆಯೋಗ (NCW) ಕೂಡ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು.
#WATCH | Tamil Nadu | Police have arrested Tamilaga Vettri Kazhagam (TVK) MLA Arul Vignesh at his residence in Kallakurichi. He is being taken away in a police vehicle. He has been arrested in connection with alleged obscene messages to the District Collector. https://t.co/K9dEK25lg7
— ANI (@ANI) November 27, 2026
ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಮದ್ರಾಸ್ ಹೈಕೋರ್ಟ್, ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನ್ಯಾಯಯುತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ, ತಿರುಪ್ಪೂರು ಎಸ್ಪಿ ಸೃಷ್ಟಿ ಸಿಂಗ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದ್ದು, ಐಜಿಪಿ ಎನ್. ಕಾಮಿನಿ ಅವರಿಗೆ ತನಿಖೆಯ ಮೇಲ್ವಿಚಾರಣೆ ವಹಿಸಲಾಗಿದೆ.
ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರಿಗೆ ನೀಡಿದ ದೂರಿನ ಮೇರೆಗೆ ತಮಿಳುನಾಡು ಸರ್ಕಾರ ನಾಲ್ವರು ಸದಸ್ಯರ ಆಂತರಿಕ ದೂರು ಸಮಿತಿಯನ್ನು (ICC) ರಚಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾಕರ್ಲ ಉಷಾ ಈ ಸಮಿತಿಯ ಅಧ್ಯಕ್ಷರಾಗಿದ್ದು, ವಿಕಲಚೇತನರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎಸ್. ಮಧುಮತಿ, ಕಾನೂನು ಕಾರ್ಯದರ್ಶಿ ಪಿ. ಸುಮತಿ ಮತ್ತು ಎನ್ಜಿಒ ಪ್ರತಿನಿಧಿ ಸುನೀತಾ ಜೋ ಸದಸ್ಯರಾಗಿದ್ದಾರೆ. ಪೋಶ್ (POSH) ಕಾಯ್ದೆಯಡಿ 60 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವಂತೆ ಈ ಸಮಿತಿಗೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ಜಿಲ್ಲಾಧಿಕಾರಿಯವರಿಗೆ ಅಸಭ್ಯ ವಾಟ್ಸಪ್ ಸಂದೇಶಗಳನ್ನು ಕಳುಹಿಸಿರುವುದು, ಅವರ ಉಡುಗೆ ಮತ್ತು ರೂಪದ ಬಗ್ಗೆ ಅನುಚಿತವಾಗಿ ಮಾತನಾಡಿರುವುದು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ಸ್ಪರ್ಶಿಸಲು ಯತ್ನಿಸಿರುವುದು ಶಾಸಕರ ಮೇಲಿರುವ ಪ್ರಮುಖ ಆರೋಪಗಳಾಗಿವೆ. ಅಲ್ಲದೆ, ರಾತ್ರಿ ವೇಳೆ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಲು ಶಾಸಕರು ಪ್ರಯತ್ನಿಸಿದ್ದರು ಎಂದೂ ದೂರಲಾಗಿದೆ.
ಈ ಹಿಂದೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದ ಶಾಸಕ ಅರುಳ್ ವಿಘ್ನೇಶ್, ತಮ್ಮ ಮತ್ತು ಆಡಳಿತ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಹೇಳಿದ್ದರು.
