ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Metro) ಮಹಿಳೆಯರ ಸುರಕ್ಷತೆ ಕುರಿತು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಮಹಿಳೆಯರು ಮೆಟ್ರೊ ನಿಲ್ದಾಣ ಅಥವಾ ಬಸ್ ನಿಲ್ದಾಣಗಳಿಗೆ ತಲುಪಲು ನಡೆದುಕೊಂಡು ಹೋಗುವಾಗಲೂ ಅಸುರಕ್ಷತೆ ಅನುಭವಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ.87.5ರಷ್ಟು ಮಂದಿ ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ನಡೆದು ಹೋಗುವಾಗ ಸುರಕ್ಷಿತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ಕಾರ್ಯನಿರ್ವಹಿಸುವ ಸೆಂಟರ್ ಫಾರ್ ಇಕ್ವಿಟಿ ಆ್ಯಂಡ್ ಇನ್ಕ್ಲೂಷನ್ (CEQUIN) ಸಂಸ್ಥೆ ನಡೆಸಿದ ‘ಎವರಿಡೇ ಜರ್ನೀಸ್: ವುಮೆನ್ಸ್ ಆ್ಯಂಡ್ ಗರ್ಲ್ಸ್ ಆಕ್ಸೆಸ್ ಟು ಫುಟ್ಪಾತ್ಸ್ ಆ್ಯಂಡ್ ಪಬ್ಲಿಕ್ ಪಾರ್ಕ್ಸ್ ಇನ್ ದಿಲ್ಲಿ’ ಎಂಬ ಅಧ್ಯಯನದಲ್ಲಿ ಈ ಅಂಶಗಳು ಬಹಿರಂಗವಾಗಿವೆ.
ಅಕ್ಟೋಬರ್ 15ರಿಂದ ನವೆಂಬರ್ 2ರವರೆಗೆ ಸಮೀಕ್ಷೆ ನಡೆಸಲಾಗಿದ್ದು, ಒಟ್ಟು 1,882 ಪ್ರತಿಕ್ರಿಯೆಗಳಲ್ಲಿ 1,588 ಪ್ರತಿಕ್ರಿಯೆಗಳನ್ನು ಮಾನ್ಯವೆಂದು ಪರಿಗಣಿಸಲಾಗಿದೆ. ಮಹಿಳೆಯರು, ಬಾಲಕಿಯರು ಹಾಗೂ ಎಲ್ಜಿಬಿಟಿಕ್ಯೂ+ ಸಮುದಾಯದವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
ಅಧ್ಯಯನದ ಪ್ರಕಾರ, ಕತ್ತಲಾದ ಬಳಿಕ ಸಮೀಪದ ಸಾರ್ವಜನಿಕ ಉದ್ಯಾನವನಗಳಲ್ಲಿ ತಾವು ಸುರಕ್ಷಿತವಾಗಿಲ್ಲ ಎಂದು ಶೇ.88.9ರಷ್ಟು ಮಂದಿ ತಿಳಿಸಿದ್ದಾರೆ. ಹಗಲಿನ ವೇಳೆಯಲ್ಲೂ ಶೇ.54ರಷ್ಟು ಮಂದಿ ಉದ್ಯಾನವನಗಳಲ್ಲಿ ಅಭದ್ರತೆ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಸಾರ್ವಜನಿಕ ಸಾರಿಗೆ ನಿಲ್ದಾಣಗಳಿಗೆ ನಡೆದು ಹೋಗುವ ಕುರಿತು ಉತ್ತರಿಸಿದವರಲ್ಲಿ ಶೇ.87.5ರಷ್ಟು ಮಂದಿ ಅಭದ್ರತೆ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯಗಳ ಕೊರತೆ
ಮೂಲಸೌಕರ್ಯಗಳ ಕೊರತೆಯೂ ಮಹಿಳೆಯರ ಸುರಕ್ಷತೆಗೆ ತೊಡಕಾಗಿದೆ. ಶೇ.76.4ರಷ್ಟು ಮಂದಿ ಪಾದಚಾರಿ ಮಾರ್ಗಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲ ಎಂದು ತಿಳಿಸಿದ್ದಾರೆ. ಶೇ.60ರಷ್ಟು ಮಂದಿ ತಮ್ಮ ಪ್ರದೇಶಗಳಲ್ಲಿನ ಪಾದಚಾರಿ ಮಾರ್ಗಗಳು ಹಾಳಾಗಿವೆ ಅಥವಾ ಕೆಲವು ಕಡೆಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.
ಪುರುಷರ ಅನುಚಿತ ವರ್ತನೆಯೂ ಮಹಿಳೆಯರ ದೈನಂದಿನ ಪ್ರಯಾಣಕ್ಕೆ ಅಡ್ಡಿಯಾಗುತ್ತಿದೆ. ಪುರುಷರು ದುರುಗುಟ್ಟಿ ನೋಡುವುದು, ಅಶ್ಲೀಲವಾಗಿ ಮಾತನಾಡುವುದು ಹಾಗೂ ಹಿಂಬಾಲಿಸುವಂತಹ ವರ್ತನೆಗಳಿಂದ ಅಸುರಕ್ಷತೆ ಉಂಟಾಗುತ್ತಿದೆ ಎಂದು ಶೇ.79.5ರಷ್ಟು ಸಮೀಕ್ಷೆ ಭಾಗವಹಿಸಿದವರು ತಿಳಿಸಿದ್ದಾರೆ.
ಇನ್ನೊಂದೆಡೆ, ಸಾರ್ವಜನಿಕ ಸ್ಥಳಗಳಲ್ಲಿನ ಸಮಸ್ಯೆಗಳಿಗೆ ಯಾವ ಸರ್ಕಾರಿ ಇಲಾಖೆ ಅಥವಾ ಸ್ಥಳೀಯ ಸಂಸ್ಥೆ ಹೊಣೆ ಎಂಬುದೇ ಶೇ.80.5ರಷ್ಟು ಮಂದಿಗೆ ತಿಳಿದಿಲ್ಲ. ಪಾದಚಾರಿ ಮಾರ್ಗ ಹಾಗೂ ಉದ್ಯಾನವನಗಳ ಸಮಸ್ಯೆಗಳ ಕುರಿತು ಎಲ್ಲಿ ದೂರು ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲ ಎಂದು ಶೇ.52.3ರಷ್ಟು ಮಂದಿ ಹೇಳಿದ್ದಾರೆ. ದೂರು ಪರಿಹಾರ ವ್ಯವಸ್ಥೆಯ ಬಗ್ಗೆಯೂ ಜನರಲ್ಲಿ ಅರಿವಿನ ಕೊರತೆ ಇರುವುದು ಅಧ್ಯಯನದಲ್ಲಿ ಕಂಡುಬಂದಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿರುವ ವರದಿ, 2024ರಲ್ಲಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧ 13,396 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ. ದೇಶದ 19 ಪ್ರಮುಖ ಮಹಾನಗರಗಳ ಪೈಕಿ ದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿದೆ.
ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆಯ ಮೇಲೂ ಸುರಕ್ಷತೆಯ ಆತಂಕ ಪರಿಣಾಮ ಬೀರುತ್ತಿದೆ ಎಂದು ವರದಿ ಗಮನ ಸೆಳೆದಿದೆ. 2023-24ನೇ ಸಾಲಿನಲ್ಲಿ ದೆಹಲಿಯಲ್ಲಿ ಮಹಿಳೆಯರ ಕಾರ್ಮಿಕ ಪಾಲ್ಗೊಳ್ಳುವಿಕೆ ಪ್ರಮಾಣ ಶೇ.14.5ರಷ್ಟಿದ್ದರೆ, ಪುರುಷರ ಪ್ರಮಾಣ ಶೇ.54ರಷ್ಟಿದೆ.ಇದನ್ನೂ ಓದಿ: ‘ಕಾರ್ಪೊರೇಟ್ ಲವ್ ಸ್ಟೋರಿ’ ವೆಬ್ ಸರಣಿ ಪ್ರೀಮಿಯರ್: ಹೊಸ ಪ್ರಯೋಗಕ್ಕೆ ಸರಣಿ ಸಾಕ್ಷಿ
ನವೆಂಬರ್ 25ರಂದು ದಕ್ಷಿಣ ದೆಹಲಿಯ ವಸಂತ ವಿಹಾರದಲ್ಲಿರುವ ವಸಂತ ಉದ್ಯಾನದಲ್ಲಿ ನಡೆದ ‘ಹೈ ಹಕ್ ಹಮಾರಾ ಹಿಸ್ಸೆದಾರಿ’ ಕಾರ್ಯಕ್ರಮದಲ್ಲಿ ಅಧ್ಯಯನ ವರದಿ ಬಿಡುಗಡೆ ಮಾಡಲಾಗಿದೆ. ಮಹಿಳೆಯರಿಗೆ ಸುರಕ್ಷಿತ ಪಾದಚಾರಿ ಮಾರ್ಗ, ಸಮರ್ಪಕ ಬೀದಿ ದೀಪ, ಉದ್ಯಾನವನಗಳಲ್ಲಿ ಸಿಸಿಟಿವಿ, ಮಹಿಳಾ ಸಿಬ್ಬಂದಿ ನಿಯೋಜನೆ ಹಾಗೂ ಸಾರ್ವಜನಿಕ ಸ್ಥಳಗಳ ನಿರ್ವಹಣೆಗೆ ಹೊಣೆಗಾರ ಇಲಾಖೆಗಳ ಸ್ಪಷ್ಟ ಮಾಹಿತಿ ಒದಗಿಸುವಂತೆ ಸಂಸ್ಥೆ ಶಿಫಾರಸು ಮಾಡಿದೆ. ಈ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ಗೂ ಸಲ್ಲಿಸಿರುವುದಾಗಿ ಸಂಸ್ಥೆ ತಿಳಿಸಿದೆ.ಇದನ್ನೂ ಓದಿ: ಭಾರತದಲ್ಲಿ ಪಾಕಿಸ್ತಾನಿ ವೆಬ್ಸಿರೀಸ್ ಪ್ರಸಾರ ಮಾಡದಂತೆ ನೆಟ್ಫ್ಲಿಕ್ಸ್ಗೆ ಕೇಂದ್ರ ಸೂಚನೆ
