ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ (KRS Dam) ನೀರಿನ ಮಟ್ಟ ದಿನೇ ದಿನೇ ಅಪಾಯಕಾರಿ ಮಟ್ಟಕ್ಕೆ ಕುಸಿಯುತ್ತಿದ್ದು, ಆತಂಕದ ಛಾಯೆ ಆವರಿಸಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಪ್ರಸ್ತುತ ನೀರಿನ ಮಟ್ಟ 95 ಅಡಿಗೆ ಇಳಿಕೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಕಾರಣ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ತೀವ್ರವಾಗಿ ಕುಸಿದಿದೆ. ಇಂದು ಜಲಾಶಯಕ್ಕೆ ಕೇವಲ 618 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಮತ್ತು ಇತರ ಅಗತ್ಯಗಳಿಗಾಗಿ ಡ್ಯಾಂನಿಂದ ಬರೋಬ್ಬರಿ 4,375 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವು ಏಳು ಪಟ್ಟು ಹೆಚ್ಚಾಗಿರುವುದರಿಂದ ಜಲಾಶಯದ ನೀರಿನ ಸಂಗ್ರಹ ಕ್ಷಿಪ್ರವಾಗಿ ಕರಗುತ್ತಿದೆ. ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಮೊದಲು; ಟೈಮ್ ಔಟ್ ಎಫೆಕ್ಟ್ – ಚೆಂಡನ್ನು ಎದುರಿಸದೆಯೇ ಕ್ಲೀನ್ ಬೌಲ್ಡ್ ಆದ ಆಟಗಾರ್ತಿ
ಬಳಕೆಗೆ ಸಿಗುವುದು ಕೇವಲ 12 ಟಿಎಂಸಿ ಮಾತ್ರ:
ಪ್ರಸ್ತುತ ಜಲಾಶಯದ ಒಟ್ಟು ನೀರಿನ ಸಂಗ್ರಹ 19.222 ಟಿಎಂಸಿಗೆ ತಲುಪಿದೆ. ಇದರಲ್ಲಿ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಹೀಗಾಗಿ ಕುಡಿಯುವ ನೀರು ಹಾಗೂ ಇನ್ನಿತರ ಅಗತ್ಯ ಬಳಕೆಗಾಗಿ ಕೇವಲ 12 ಟಿಎಂಸಿ ನೀರು ಮಾತ್ರ ಲಭ್ಯವಿದೆ.
ತಮಿಳುನಾಡಿಗೆ ನೀರು ಬಿಡಲು CWMA ಆದೇಶ – ಜನರ ಆಕ್ರೋಶ
ಒಂದೆಡೆ ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲಾಶಯ ಬರಿದಾಗುತ್ತಿದ್ದರೆ, ಮತ್ತೊಂದೆಡೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ನೀರು ಹರಿಸುವಂತೆ ಪದೇ ಪದೇ ಆದೇಶ ಹೊರಡಿಸುತ್ತಿರುವುದು ರಾಜ್ಯದ ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಲಭ್ಯವಿರುವ ಅಲ್ಪ ಪ್ರಮಾಣದ ನೀರು ಮುಂದಿನ ಬೇಸಿಗೆಯ ಕುಡಿಯುವ ನೀರಿನ ಅಗತ್ಯಕ್ಕೂ ಸಾಕಾಗುವುದಿಲ್ಲ ಎಂಬ ಆತಂಕ ತಲೆದೋರಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಭೀಕರ ಬರಗಾಲ ಎದುರಾಗುವ ಮುನ್ಸೂಚನೆ ಸಿಗುತ್ತಿದೆ.ಇದನ್ನೂ ಓದಿ: ದೇಶದ ಗಮನ ಸೆಳೆದ ಬಿಹಾರ ಶಾಸಕನ ಮಗಳ ಮದ್ವೆ – ವರನ ಮೆರವಣಿಗೆಗೆ 151 ವಾಹನಗಳ ವ್ಯವಸ್ಥೆ, ನೋಡಲು ಟವರ್ ಹತ್ತಿದ ಜನ
