ಕಾರ್ತಿಕ ಮಾಸದ ಹುಣ್ಣಿಮೆ ಎಂದರೆ ಸಾಕು, ಎಲ್ಲೆಡೆ ದೀಪಗಳ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ. ಮನೆ, ದೇವಸ್ಥಾನ ಹಾಗೂ ನದಿ ತೀರಗಳಲ್ಲಿ ಹಣತೆಗಳ ಬೆಳಕು ಕಂಗೊಳಿಸುವ ಈ ಶುಭದಿನಕ್ಕೆ ಈ ಬಾರಿ ಆಕಾಶವೂ ವಿಶೇಷ ಮೆರುಗು ನೀಡಲಿದೆ. ಕಾರ್ತಿಕ ದೀಪೋತ್ಸವದ(Karthika Deepotsava) ಸಂಭ್ರಮಕ್ಕೆ ಚಂದಿರನೇ ತನ್ನದೊಂದು ದೀಪ ಹಚ್ಚಲು ಬರುತ್ತಿದ್ದಾನೇನೋ ಎಂಬಂತೆ ಇಂದು ಆಕಾಶದಲ್ಲಿ ಅಪರೂಪದ ಸೂಪರ್ ಮೂನ್ (Super Moon) ದರ್ಶನವಾಗಲಿದೆ. ಸಾಮಾನ್ಯ ಹುಣ್ಣಿಮೆಗಿಂತ ಇಂದು ಚಂದ್ರ ದೊಡ್ಡದಾಗಿ ಹಾಗೂ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸುವ ಮೂಲಕ ಖಗೋಳಾಸಕ್ತರ ಗಮನ ಸೆಳೆಯಲಿದೆ.
ಏನಿದು ಸೂಪರ್ ಮೂನ್ ವಿಸ್ಮಯ?
ಚಂದ್ರ ಭೂಮಿಯನ್ನು ಸುತ್ತುವ ಕಕ್ಷೆಯು ಪರಿಪೂರ್ಣ ವೃತ್ತಾಕಾರದಲ್ಲಿಲ್ಲ. ಬದಲಾಗಿ ಅದು ದೀರ್ಘವೃತ್ತಾಕಾರವಾಗಿದೆ. ಹೀಗಾಗಿ ಚಂದ್ರ ತನ್ನ ಕಕ್ಷೆಯಲ್ಲಿ ಸಂಚರಿಸುವಾಗ ಕೆಲವೊಮ್ಮೆ ಭೂಮಿಗೆ ಅತಿ ಹತ್ತಿರವಾಗಿಯೂ, ಮತ್ತೊಮ್ಮೆ ದೂರವಾಗಿಯೂ ಇರುತ್ತಾನೆ. ಚಂದ್ರ ಭೂಮಿಗೆ ಅತಿ ಸಮೀಪ ಬರುವ ಸ್ಥಿತಿಯನ್ನು ‘ಪೆರಿಜಿ’ ಹಾಗೂ ಅತಿ ದೂರದಲ್ಲಿರುವ ಸ್ಥಿತಿಯನ್ನು ‘ಅಪೋಜಿ’ ಎಂದು ಕರೆಯಲಾಗುತ್ತದೆ. ಹುಣ್ಣಿಮೆಯ ದಿನವೇ ಚಂದ್ರ ಭೂಮಿಗೆ ಅತಿ ಸಮೀಪ ಬಂದಾಗ ಸಂಭವಿಸುವ ಖಗೋಳ ವಿದ್ಯಮಾನವೇ ‘ಸೂಪರ್ ಮೂನ್’.
30% ಹೆಚ್ಚು ಪ್ರಕಾಶಮಾನ, 14% ದೊಡ್ಡ ಗಾತ್ರ:
ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ಅಂತರ ಸುಮಾರು 3 ಲಕ್ಷದ 84 ಸಾವಿರ ಕಿಲೋಮೀಟರ್ ಆಗಿದೆ. ಆದರೆ ಇಂದು ಚಂದ್ರ ಭೂಮಿಯಿಂದ ಕೇವಲ 3 ಲಕ್ಷದ 60 ಸಾವಿರ ಕಿಲೋಮೀಟರ್ ಸಮೀಪದಲ್ಲಿರಲಿದ್ದಾನೆ. ಇದರಿಂದಾಗಿ ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಇಂದಿನ ಚಂದ್ರ ಗಾತ್ರದಲ್ಲಿ ಸುಮಾರು ಶೇ. 14 ರಷ್ಟು ದೊಡ್ಡದಾಗಿ ಹಾಗೂ ಬೆಳಕಿನ ಪ್ರಭೆಯಲ್ಲಿ ಶೇ. 30 ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಂಗೊಳಿಸಲಿದ್ದಾನೆ.
ಖಗೋಳಾಸಕ್ತರ ಮಾತು:
ಈ ಕುರಿತು ಮಾಹಿತಿ ನೀಡಿರುವ ಉಡುಪಿಯ ಖಗೋಳಾಸಕ್ತ ಡಾ. ಎ.ಪಿ. ಭಟ್ ಅವರು, “ಚಂದ್ರ ಭೂಮಿಯನ್ನು ಸುತ್ತುವ ಪಥ ದೀರ್ಘವೃತ್ತಾಕಾರದಲ್ಲಿರುವುದರಿಂದ ಪ್ರತೀ 28 ದಿನಗಳಿಗೊಮ್ಮೆ ಚಂದ್ರ ಭೂಮಿಗೆ ಸಮೀಪ ಹಾಗೂ ದೂರದ ಸ್ಥಾನಗಳಿಗೆ ಬರುತ್ತಾನೆ. ಈ ಬಾರಿ ಹುಣ್ಣಿಮೆಯ ದಿನವೇ ಚಂದ್ರ ಭೂಮಿಗೆ ಸಮೀಪ ಬರುತ್ತಿರುವುದರಿಂದ ಸೂಪರ್ ಮೂನ್ ಸಂಭವಿಸುತ್ತಿದೆ. ಇದರಿಂದ ಚಂದ್ರ ಎಂದಿಗಿಂತ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿದ್ದಾನೆ” ಎಂದು ತಿಳಿಸಿದ್ದಾರೆ.
ಧಾರ್ಮಿಕ ಮತ್ತು ಖಗೋಳ ವಿಸ್ಮಯದ ಸಂಗಮ:
ಈ ಬಾರಿಯ ಕಾರ್ತೀಕ ಹುಣ್ಣಿಮೆಯ ಮತ್ತೊಂದು ವಿಶೇಷವೆಂದರೆ ಕೃತ್ತಿಕಾ ನಕ್ಷತ್ರದ ಹಿನ್ನೆಲೆಯಲ್ಲಿ ಚಂದ್ರನ ದರ್ಶನವಾಗುತ್ತಿರುವುದು. ಕಾರ್ತಿಕ ಮಾಸದ ಧಾರ್ಮಿಕ ಮಹತ್ವದ ಜೊತೆಗೆ ಖಗೋಳದ ಈ ವಿಸ್ಮಯವೂ ಒಂದೇ ದಿನ ಸಂಭವಿಸುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ದೇವಸ್ಥಾನಗಳಲ್ಲಿ ದೀಪೋತ್ಸವದ ಸಂಭ್ರಮ, ಮನೆಗಳಲ್ಲಿ ದೀಪಗಳ ಸಾಲು ಹಾಗೂ ಆಕಾಶದಲ್ಲಿ ಸೂಪರ್ ಮೂನ್ನ ಬೆಳ್ಳಿ ಬೆಳದಿಂಗಳು—ಹೀಗೆ ಭೂಮಿ ಮತ್ತು ಆಕಾಶ ಎರಡೂ ಬೆಳಕಿನ ಹಬ್ಬಕ್ಕೆ ಸಾಕ್ಷಿಯಾಗಲಿವೆ.
