ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ (Freedom Park) ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರನ್ನು (ASHA Workers Protest) ಭೇಟಿ ಮಾಡಿದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (Ramya) ʻನಮ್ಮ ಸರ್ಕಾರ ನಿಮಗೆ ಒಳ್ಳೆಯ ಕೆಲಸ ಮಾಡುತ್ತೆʼ ಎಂದು ಭರವಸೆ ನೀಡಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರ ಬಳಿ ತೆರಳಿದ ರಮ್ಯಾ, ಎಲ್ಲರ ಕೈಕುಲುಕಿ ಆತ್ಮೀಯವಾಗಿ ಮಾತನಾಡಿಸಿ ಅವರ ಕಷ್ಟ-ಸುಖಗಳನ್ನು ಆಲಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ತಾಯಿಯೊಂದಿಗೆ ಇದ್ದ ಪುಟಾಣಿ ಮಗುವೊಂದನ್ನು ರಮ್ಯಾ ಪ್ರೀತಿಯಿಂದ ಮಾತನಾಡಿಸಿದರು. ನಂತರ ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಅವರು, ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ವೇದಿಕೆ ಮೇಲೆ ಮಾತನಾಡಿದ ರಮ್ಯಾ, ನಿಮ್ಮನ್ನೆಲ್ಲಾ ಈ ಸ್ಥಿತಿಯಲ್ಲಿ ನೋಡಿ ತುಂಬಾ ಸಂಕಷ್ಟ ಆಯ್ತು. ಈಗಷ್ಟೇ ಇಲ್ಲಿ ಒಂದು ಪುಟಾಣಿ ಮಗುವನ್ನ ಮಾತನಾಡಿಸಿದೆ, ಆ ಮಗು ಸ್ಕೂಲ್ಗೆ ಹೋಗ್ತಿಲ್ಲ ಅಂತ ಹೇಳ್ತು. ತಾಯಿಯೇ ಇಲ್ಲಿ ಪ್ರತಿಭಟನೆಯಲ್ಲಿ ಕೂತಿರುವಾಗ ಮಗು ಹೇಗೆ ತಾನೇ ಶಾಲೆಗೆ ಹೋಗೋಕೆ ಆಗುತ್ತೆ? ಎಂದು ಬೇಸರ ವ್ಯಕ್ತಪಡಿಸಿದರು.ಇದನ್ನೂ ಓದಿ: ಎಫ್ಡಿಎ/ಎಸ್ ಡಿಎ ಪರೀಕ್ಷೆ: ಅರ್ಜಿ ಸಲ್ಲಿಸಲು ನ.30ರವರೆಗೆ ದಿನಾಂಕ ವಿಸ್ತರಣೆ – ಕೆಇಎ
ತಮ್ಮ ಬೇಡಿಕೆ ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂಬ ಕಾರ್ಯಕರ್ತೆಯರ ನಿರ್ಧಾರಕ್ಕೆ ಸ್ಪಂದಿಸಿದ ರಮ್ಯಾ, ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿರುವುದಾಗಿ ಭರವಸೆ ನೀಡಿದರು. ನಾನು ಕೂಡ ಆರೋಗ್ಯ ಸಚಿವರ ಜೊತೆಗೆ ಈ ಬಗ್ಗೆ ಮಾತನಾಡಿದ್ದೇನೆ. ಆಶಾ ಕಾರ್ಯಕರ್ತೆಯರ ಕೆಲಸ ಎಷ್ಟು ಮುಖ್ಯ ಅನ್ನೋದನ್ನ ಅವರೂ ಒಪ್ಪಿಕೊಂಡಿದ್ದಾರೆ. ನಮ್ಮ ಸರ್ಕಾರ ನಿಮಗೆ ಖಂಡಿತ ಒಳ್ಳೆಯದನ್ನೇ ಮಾಡುತ್ತೆ, ಆದಷ್ಟು ಬೇಗನೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಧೈರ್ಯ ತುಂಬಿದರು.ಇದನ್ನೂ ಓದಿ: ಪಿಜಿ ವೈದ್ಯಕೀಯ ಹೊರ ಹೋಗಲು ಅವಕಾಶ: ಕೆಇಎ
