ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಖ್ಯಾತಿಯ ಹಿರಿಯ ನಟ ಅಂಬರೀಶ್(Ambareesh) ಅವರು ನಮ್ಮನ್ನಗಲಿ ಇಂದಿಗೆ (ನ.24) ಎಂಟು ವರ್ಷಗಳು ಉರುಳಿವೆ. 2018ರ ನವೆಂಬರ್ 24ರಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದ ನೆಚ್ಚಿನ ನಟನ 8ನೇ ವರ್ಷದ ಪುಣ್ಯತಿಥಿ ಅಂಗವಾಗಿ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕದಲ್ಲಿ ವಿಶೇಷ ಪೂಜೆ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳು ನೆರವೇರಿದವು.
ಪುಣ್ಯತಿಥಿ ಹಿನ್ನೆಲೆಯಲ್ಲಿ ಅಂಬರೀಶ್ ಪತ್ನಿ ಸುಮಲತಾ(Sumalatha) ಹಾಗೂ ಪುತ್ರ ಅಭಿಷೇಕ್ ಅಂಬರೀಶ್ ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಂಬರೀಶ್ ಅವರಿಗೆ ಅತ್ಯಂತ ಪ್ರಿಯವಾಗಿದ್ದ ವಿವಿಧ ಮಾಂಸಾಹಾರ ಖಾದ್ಯಗಳನ್ನು ಸಮಾಧಿಯ ಮುಂದೆ ಎಡೆ ಇಟ್ಟು, ಧೂಪ-ದೀಪ ಬೆಳಗಿ ನಮನ ಸಲ್ಲಿಸಲಾಯಿತು. ಪುತ್ರ ಅಭಿಷೇಕ್ ಅಂಬರೀಶ್ ತಂದೆಯ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿದರು.
ಅಂಬರೀಶ್ ಅವರ ಸ್ಮರಣಾರ್ಥ ಸ್ಮಾರಕದ ಆವರಣದಲ್ಲಿ ಅಭಿಮಾನಿಗಳಿಗಾಗಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಸ್ಮಾರಕಕ್ಕೆ ಭೇಟಿ ನೀಡಿದ ನೂರಾರು ಅಭಿಮಾನಿಗಳಿಗೆ ಬಿರಿಯಾನಿ ಹಾಗೂ ಚಿಕನ್ ಸಾಂಬಾರ್ ವಿತರಿಸಲಾಯಿತು. ಸುಮಲತಾ ಮತ್ತು ಅಭಿಷೇಕ್ ಅಂಬರೀಶ್ ಅನ್ನದಾನಕ್ಕೆ ಚಾಲನೆ ನೀಡಿದರು. ಇದರ ಜೊತೆಗೆ ಅಭಿಮಾನಿ ಸಂಘಗಳ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಕುಟುಂಬಸ್ಥರ ಪೂಜೆಯ ಬಳಿಕ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ನೂರಾರು ಅಭಿಮಾನಿಗಳು ಸ್ಮಾರಕದ ದರ್ಶನ ಪಡೆದು ನೆಚ್ಚಿನ ನಟನನ್ನು ನೆನೆದು ಭಾವುಕರಾದರು.
ಸದಾ ಜನಪ್ರೇಮಿಯಾಗಿ, ಸ್ನೇಹಜೀವಿಯಾಗಿ ಬದುಕಿದ್ದ ಅಂಬರೀಶ್ ತಮ್ಮ ನೇರ ನುಡಿ ಹಾಗೂ ಪ್ರೀತಿಯ ಬೈಗುಳದಿಂದಲೇ ಅಭಿಮಾನಿಗಳ ಮನಗೆದ್ದಿದ್ದರು. ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಅವರು, ಕಷ್ಟ ಎಂದು ಬಂದವರಿಗೆ ಇಲ್ಲ ಎನ್ನದೆ ಸಹಾಯ ಮಾಡುವ ಮೂಲಕ ‘ಕಲಿಯುಗ ಕರ್ಣ’ ಎಂದೇ ಹೆಸರಾಗಿದ್ದರು. ಅಂಬರೀಶ್ ಅಗಲಿ 8 ವರ್ಷಗಳು ಕಳೆದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಅವರ ನೆನಪು ಇಂದಿಗೂ ಅಜರಾಮರವಾಗಿದೆ.
