– ಕಾಂಗ್ರೆಸ್ ನಾಯಕಿ ಆತ್ಮಕಥೆಯಲ್ಲಿ ಸಾವರ್ಕರ್ ಬಗ್ಗೆ ತಪ್ಪಾಗಿ ಚಿತ್ರಿಸಲಾಗಿದೆ ಅಂತ ಆಕ್ಷೇಪ
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ (Sonia Gandhi) ಸಾವರ್ಕರ್ ಮೊಮ್ಮಗ ಸತ್ಯಕಿ ಅಶೋಕ್ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಸೋನಿಯಾ ಗಾಂಧಿ ಬರೆದಿರುವ Belonging: A Journey of Love ಪುಸ್ತಕದಲ್ಲಿನ ಸಾವರ್ಕರ್ (Savarkar) ಕುರಿತ ಹೇಳಿಕೆಗಳಿಗೆ ಸತ್ಯಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುಸ್ತಕದ 201 ಮತ್ತು 443ನೇ ಪುಟಗಳಲ್ಲಿನ ಉಲ್ಲೇಖಗಳು ಆಧಾರ ರಹಿತ ಮತ್ತು ಇತಿಹಾಸವನ್ನು ತಪ್ಪಾಗಿ ಬಿಂಬಿಸಿವೆ ಎಂದು ಆರೋಪಿಸಿದ್ದಾರೆ. ಸಾವರ್ಕರ್ ಅವರ ಗೌರವ ಮತ್ತು ಪರಂಪರೆಗೆ ಧಕ್ಕೆ ತರಲಾಗಿದೆ. ಆದ್ದರಿಂದ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ಸೋನಿಯಾಗೆ ಸಾವರ್ಕರ್ ಮೊಮ್ಮಗ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅತ್ತೆಯನ್ನು ನೋಡಿದಾಗ ಭಯವಾಗ್ತಿತ್ತು – ಸೋನಿಯಾ ಗಾಂಧಿ
ಸತ್ಯಕಿ ತಮ್ಮ ವಕೀಲರಾದ ಸಂಗ್ರಾಮ್ ಕೊಲ್ಹತ್ಕರ್ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ‘ಪುಟ ಸಂಖ್ಯೆ 201 ರಲ್ಲಿ ಇರುವ ಹೇಳಿಕೆಯನ್ನು ನನ್ನ ಕಕ್ಷಿದಾರರು ನಿರ್ದಿಷ್ಟವಾಗಿ ಆಕ್ಷೇಪಿಸುತ್ತಾರೆ. ಇದರಲ್ಲಿ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ ಎಂದು ಹೇಳಲಾದ ವ್ಯಕ್ತಿಗಳ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ. ಈ ಹೇಳಿಕೆಯನ್ನು ರೂಪಿಸಿದ ವಿಧಾನವು ಸ್ವಾತಂತ್ರ್ಯವೀರ ಸಾವರ್ಕರ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಅಥವಾ ಸಹಕರಿಸುವ ಕೃತ್ಯಗಳೊಂದಿಗೆ ಸಂಬಂಧ ಹೊಂದಿದ್ದರು ಅಥವಾ ಜವಾಬ್ದಾರರಾಗಿದ್ದರು ಎಂಬ ಭಾವನೆಯನ್ನು ಸೃಷ್ಟಿಸುತ್ತದೆ. ನನ್ನ ಕಕ್ಷಿದಾರರು ಅಂತಹ ಸೂಚನೆಯನ್ನು ಸ್ಪಷ್ಟವಾಗಿ ವಿರೋಧಿಸುತ್ತಾರೆ. ಸಾವರ್ಕರ್ ಅವರ ಸೆರೆವಾಸ, ಅರ್ಜಿಗಳು ಮತ್ತು ರಾಜಕೀಯ ಚಟುವಟಿಕೆಗಳನ್ನು ಪರಿಶೀಲಿಸಬೇಕಾದ ಐತಿಹಾಸಿಕ ಸಂದರ್ಭದಿಂದ ಇದು ಬೆಂಬಲಿತವಲ್ಲ ಎಂದು ಹೇಳುತ್ತಾರೆ’ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಸ್ವಾತಂತ್ರ್ಯವೀರ ಸಾವರ್ಕರ್ ಕುಟುಂಬದ ಸದಸ್ಯನಾಗಿ ಸತ್ಯಕಿಗೆ ಸೋನಿಯಾ ಗಾಂಧಿಯವರ ಹೇಳಿಕೆಗಳು ಗಂಭೀರ ದುಃಖ ಮತ್ತು ಅಸಮಾಧಾನವನ್ನುಂಟುಮಾಡಿದೆ ಎಂದು ಸತ್ಯಕಿಯವರ ವಕೀಲರು ನೋಟಿಸ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಿ ಬರಲಿದೆ ಸೋನಿಯಾ ಗಾಂಧಿ ಆತ್ಮಚರಿತ್ರೆ
