– 60 ಎ-ಗ್ರೇಡ್ ಕ್ಷೇತ್ರಗಳಿಗೆ ಕಾಂಗ್ರೆಸ್ ಪಟ್ಟು
ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭೆ (UP Election 2027) ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ಮಾತುಕತೆ ಆರಂಭವಾಗಿದೆ. ದೆಹಲಿಯಲ್ಲಿ (Congress) ನಡೆದ ಮೊದಲ ಸುತ್ತಿನ ಮಾತುಕತೆ ಪೂರ್ಣಗೊಂಡಿದ್ದು, ಕಾಂಗ್ರೆಸ್ಗೆ 54 ಕ್ಷೇತ್ರಗಳ ಪಟ್ಟಿಯನ್ನು ಎಸ್ಪಿ ಹಂಚಿಕೊಂಡಿದೆ.
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 100ಕ್ಕೂ ಹೆಚ್ಚು ಕ್ಷೇತ್ರಗಳನ್ನು ತಮಗೆ ನೀಡುವಂತೆ ಕಾಂಗ್ರೆಸ್ ಆರಂಭದಲ್ಲಿ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಈ ಪೈಕಿ ಗೆಲ್ಲುವ ಸಾಧ್ಯತೆ ಹೆಚ್ಚಿರುವ 55ರಿಂದ 60 ಎ-ಗ್ರೇಡ್ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹೆಚ್ಚಿನ ಆಸಕ್ತಿ ಹೊಂದಿದೆ.
ಆದರೆ, ಕಾಂಗ್ರೆಸ್ಗೆ 40ರಿಂದ 45 ಕ್ಷೇತ್ರಗಳನ್ನು ನೀಡಲು ಎಸ್ಪಿ ಒಲವು ಹೊಂದಿದೆ ಎನ್ನಲಾಗಿತ್ತು. ಇದೀಗ 54 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ಗೆ ನೀಡಿರುವುದು ಕ್ಷೇತ್ರ ಹಂಚಿಕೆ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯ ಹಾಗೂ ಕ್ಷೇತ್ರಗಳಲ್ಲಿ ಪಕ್ಷಗಳ ಬಲವನ್ನು ಆಧರಿಸಿ ಸ್ಥಾನ ಹಂಚಿಕೆ ಮಾಡಬೇಕು ಎಂಬುದು ಎಸ್ಪಿ ನಿಲುವಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಎರಡೂ ಪಕ್ಷಗಳ ತಲಾ ನಾಲ್ವರು ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ಪರವಾಗಿ ಪ್ರಮೋದ್ ತಿವಾರಿ, ರಾಜೇಂದ್ರ ಪಾಲ್ ಗೌತಮ್, ಆರಾಧನಾ ಮಿಶ್ರಾ ಮತ್ತು ಇಮ್ರಾನ್ ಮಸೂದ್ ಭಾಗವಹಿಸಿದ್ದರು. ಎಸ್ಪಿ ಪರವಾಗಿ ರಾಮ್ ಗೋಪಾಲ್ ಯಾದವ್ ಸೇರಿದಂತೆ ನಾಲ್ವರು ನಾಯಕರು ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.ಇದನ್ನೂ ಓದಿ: ಹನುಮಾನ್ 2 – ದಿ ರೈಸ್ ಆಫ್ ವಾನರಾಸ್ ಸಿನಿಮಾ ಅಧಿಕೃತ ಘೋಷಣೆ
ಸಭೆಯ ಬಳಿಕ ಮಾತನಾಡಿದ ಎಸ್ಪಿ ಸಂಸದ ರಾಮ್ ಗೋಪಾಲ್ ಯಾದವ್, ಮಾತುಕತೆ ಸೌಹಾರ್ದಯುತವಾಗಿ ನಡೆದಿದೆ. ಎರಡೂ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿವೆ ಎಂದು ತಿಳಿಸಿದರು. ಮುಂದಿನ ಸುತ್ತಿನ ಮಾತುಕತೆಯ ಬಳಿಕ ಕ್ಷೇತ್ರ ಹಂಚಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.ಇದನ್ನೂ ಓದಿ: ಬಾಲಕೃಷ್ಣ ಅಲ್ಲ, ಬರೀ ಬಾಲ: ಏಕವಚನದಲ್ಲೇ ರಾಜಣ್ಣ ವಾಗ್ದಾಳಿ
ಅಮೇಠಿ, ರಾಯ್ಬರೇಲಿ ಮತ್ತು ಸಹಾರನ್ಪುರ ಕ್ಷೇತ್ರಗಳ ಹಂಚಿಕೆ ವಿಚಾರವೂ ಮಾತುಕತೆಯಲ್ಲಿ ಪ್ರಮುಖವಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ನವೆಂಬರ್ 16ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ನಡುವೆ ಪ್ರಾಥಮಿಕ ಮಾತುಕತೆ ನಡೆದಿತ್ತು.
