ಬೆಂಗಳೂರು: 10ನೇ ಆರೋಪಿ ವಿನಯ್ ಹೊರತುಪಡಿಸಿದ್ರೆ, ದರ್ಶನ್ (Darshan), ಪವಿತ್ರಾಗೌಡ ಸೇರಿ ಇತರ ಯಾವುದೇ ಆರೋಪಿಗಳನ್ನ ನಾನು ನೋಡಿಲ್ಲ ಎಂದು ಪಟ್ಟಣಗೆರೆ ಶೆಡ್ ವಾಚ್ಮ್ಯಾನ್ (Pattanagere Shed Watchman) ನರೇಂದ್ರ ಸಿಂಗ್ ಸಾಕ್ಷಿ ನುಡಿದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Murder Case) ಸಂಬಂಧ ಇಂದು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ಗೆ ಪಟ್ಟಣಗೆರೆ ಶೆಡ್ನ ಸೆಕ್ಯೂರಿಟಿ ಆಗಿದ್ದ ನರೇಂದ್ರ ಸಿಂಗ್ ಹಾಜರಾಗಿ ಹಿಂದಿ ಭಾಷೆಯಲ್ಲಿ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ದರ್ಶನ್ ಸೇರಿ ಜೈಲಿನಲ್ಲಿರೋ ಆರೋಪಿಗಳನ್ನ ನೋಡಿಲ್ಲ ಅಂತಾ ಸಾಕ್ಷಿ ನುಡಿದಿದ್ದಾರೆ.
ವಿಚಾರಣೆ ವೇಳೆ ಸಾಕ್ಷಿ ನುಡಿದ ನರೇಂದ್ರ ಸಿಂಗ್, ಹಿಂದಿ ಭಾಷೆಯಲ್ಲಿ ಹೇಳಿಕೆ ನೀಡಿದರು. ಎಸ್ಪಿಪಿ ಪ್ರಸನ್ನ ಕುಮಾರ್ ಸಹ ಹಿಂದಿಯಲ್ಲೇ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು. ಹಿಂದಿ ಬಿಟ್ಟು ಬೇರೆ ಭಾಷೆ ಬರೋದಿಲ್ವಾ ಅಂತ ಎಸ್ಪಿಪಿ ಕೇಳಿದ ಪ್ರಶ್ನೆಗೆ, ಹಿಂದಿ ಬಿಟ್ಟರೆ ಬೇರೆ ಭಾಷೆ ಬರೋದಿಲ್ಲ, ಕನ್ನಡವೂ ಅರ್ಥ ಆಗೋದಿಲ್ಲ ಎಂದು ವಾಚ್ಮ್ಯಾನ್ ಹೇಳಿದ್ರು. ಕೊನೆಗೆ ಅಗತ್ಯ ಭಾಷಾಂತರವಾದಿ ಕರೆಸಲು ಎಸ್ಪಿಪಿ ಮನವಿ ಮಾಡಿದ್ರು.
ಮುಂದುವರಿದು… ಎ10 ಆರೋಪಿ ವಿನಯ್ ಬಿಟ್ಟು ದರ್ಶನ್, ಪವಿತ್ರಾಗೌಡ ಆಗಲಿ ಬೇರೆ ಯಾರನ್ನೂ ನಾನು ನೋಡಿಲ್ಲ. 2024ರ ಜೂನ್ 8ರಂದು ಶೆಡ್ನಲ್ಲಿ ಘಟನೆ ಯಾವುದೇ ನಡೆದಿಲ್ಲ. ಎಂದಿನಂತೆಯೇ ವಾಹನಗಳ ಚಲನವಲನ ಇತ್ತು, ಬೇರೆನೂ ನಡೆದಿಲ್ಲ ಎಂದಿದ್ದಾರೆ ವಾಚ್ಮ್ಯಾನ್. ಇನ್ನೂ ಶೆಡ್ ಕೆಲಸಗಾರ ಕಿರಣ್ ನಾನೇನು ನೋಡಿಲ್ಲ ಎಂದು ಪ್ರತಿಕೂಲ ಸಾಕ್ಷಿ ನೀಡಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಎಸ್ಪಿಪಿ, ನರೇಂದ್ರ ಸಿಂಗ್ನನ್ನ ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಲು ಮನವಿ ಮಾಡಿದ್ರು. ಕೋರ್ಟ್ ಅನುಮತಿ ಪಡೆದು ಪಾಟಿ ಸವಾಲು ಶುರು ಮಾಡಿದ್ರು. ಬಳಿಕ ಸೋಮವಾರಕ್ಕೆ ನರೇಂದ್ರ ಸಿಂಗ್ ಪಾಟಿಸವಾಲಿಗೆ ಮುಂದೂಡಿಕೆ ಮನವಿ ಮಾಡಿದ್ರು. ಇದಕ್ಕೆ ಆಕ್ಷೇಪ ಎತ್ತಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ಸ್ವಲ್ಪ ಮಾಡಿ ಮುಂದಕ್ಕೆ ಹೋಗೋದು ಸರಿ ಅಲ್ಲ. ಈ ರೀತಿ ಟ್ರಯಲ್ ಮಾಡಿದ್ರೆ ತುಂಬಾ ದಿನ ಆಗುತ್ತೆ ಎಂದರು. ಇದಕ್ಕೆ ಎಸ್ಪಿಪಿ, ಹಿಂದಿಯಲ್ಲಿ ಪಾಟಿಸವಾಲು ಮಾಡಬೇಕು, ಹೀಗಾಗಿ ಕಾಲಾವಕಾಶ ಬೇಕು ಎಂದು ಹೇಳಿದ್ರು. ಬಳಿಕ ಕೋರ್ಟ್ ವಾಚ್ಮ್ಯಾನ್ ಮತ್ತು ಶೆಡ್ ಕೆಲಸಗಾರ ಕಿರಣ್ ಪಾಟಿಸವಾಲು ಪ್ರಕ್ರಿಯೆಯನ್ನ ಸೋಮವಾರಕ್ಕೆ ಮುಂದೂಡಿತು.
ಪಾಟಿ ಸವಾಲು (Cross-Examination) ಎಂದರೆ, ಒಂದು ಪಕ್ಷದ ಪರವಾಗಿ ಸಾಕ್ಷ್ಯ ನೀಡಿದ ವ್ಯಕ್ತಿಯನ್ನು ಎದುರಾಳಿ ಪಕ್ಷದ ವಕೀಲರು ಪ್ರಶ್ನಿಸುವ ಕಾನೂನುಬದ್ಧ ಪ್ರಕ್ರಿಯೆ.
