ಗುಜರಾತ್: ಇಲ್ಲಿನ ಕಚ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ದುರ್ಮರಣಕ್ಕೀಡಾಗಿದ್ದಾರೆ.
ವೇಕಾರಿಯಾ ರಣ್ ಸಮೀಪ ಕಾರು ಮತ್ತು ಟ್ರೈಲರ್ ಲಾರಿ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಪುಟ್ಟ ಮಕ್ಕಳು ಸೇರಿದ್ದಾರೆ. ಎರಡೂ ವಾಹನಗಳ ನಡುವಿನ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಯೋಧನ ಕುಟುಂಬಕ್ಕೆ ಸೇರಿದವರು ಅಪಘಾತದಲ್ಲಿ ಸಾವು
ಕಾರು ಮತ್ತು ಟ್ರೈಲರ್ ಲಾರಿ ನಡುವೆ ಸಂಭವಿಸಿದ ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ಕಾರು ಪಲ್ಟಿಯಾಗಿ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ರಭಸಕ್ಕೆ ಮೃತದೇಹಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಿಂದ ಜಿಲ್ಲೆಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಅಪಘಾತದಲ್ಲಿ ಮೃತಪಟ್ಟವರು ಉತ್ತರಾಖಂಡ ಮೂಲದ ಸೇನಾ ಯೋಧರೊಬ್ಬರ ಕುಟುಂಬದ ಸದಸ್ಯರು ಎನ್ನಲಾಗಿದೆ. ಭುಜ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯ ಕುಟುಂಬದವರು ಹಾಗೂ ಅವರ ಸಂಬಂಧಿಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

