– ಫುಟ್ಪಾತ್ ರಸ್ತೆಯ ಜಾಗ ಒತ್ತುವರಿ ಮಾಡಿಕೊಂಡವರಿಗೆ ಬಿಸಿ
ಬೆಂಗಳೂರು: ನಗರದ ವಾರ್ಡ್ಗಳಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನ ಪರಿಹರಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ವಾರ್ಡ್ ಒನ್’ ಸ್ವಚ್ಛತಾ ಅಭಿಯಾನದ 3ನೇ ಹಂತಕ್ಕೆ ಇಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಚಾಲನೆ ನೀಡಿದರು.
ಬೆಂಗಳೂರು ನಗರದ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳ ಸುಧಾರಣೆಯ ಗುರಿಯೊಂದಿಗೆ ವಾರ್ಡ್ ಒನ್ ಅಭಿಯಾನದ ಮೂರನೇ ಹಂತಕ್ಕೆ ಇಂದು ಕೋಣನಕುಂಟೆ ಜಂಕ್ಷನ್ನಲ್ಲಿ ಚಾಲನೆ ನೀಡಲಾಯಿತು. ನಗರದ ನಾಗರಿಕ ಮೂಲಸೌಕರ್ಯವನ್ನು ಬಲಪಡಿಸಿ, ಜನರಿಗೆ ಗೋಚರಿಸುವ ಬದಲಾವಣೆ ತರುವ ನಿಟ್ಟಿನಲ್ಲಿ ನಮ್ಮ ಕಾರ್ಯ ಮುಂದುವರಿಯಲಿದೆ.
The Ward One campaign is a citywide effort to improve Bengaluru’s roads, footpaths and public spaces through focused, coordinated action. We launched Phase 3 of the Ward One drive today at Konanakunte Junction, the campaign will continue to work on visible improvements across the city and strengthen everyday civic infrastructure.
— Krishna Byre Gowda (@krishnabgowda) November 21, 2026
ಈಗಾಗಲೇ ಮೊದಲ ಹಂತದಲ್ಲಿ 42 ವಾರ್ಡ್ಗಳಲ್ಲಿ ಹಾಗೂ 2ನೇ ಹಂತದಲ್ಲಿ 53 ವಾರ್ಡ್ಗಳಲ್ಲಿ ಸ್ವಚ್ಛತಾ ಅಭಿಯಾನ (Ward One campaign) ನಡೆಸಲಾಗಿದೆ. ಇದೀಗ 3ನೇ ಹಂತದಲ್ಲಿ ನಗರದ ಹಲವು ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಈ ಅಭಿಯಾನದಡಿ ವಾರ್ಡ್ಗಳಲ್ಲಿನ ರಸ್ತೆ ಗುಂಡಿಗಳನ್ನ ಮುಚ್ಚುವುದು, ಚರಂಡಿಗಳ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಕಸಮುಕ್ತ ಪರಿಸರ ನಿರ್ಮಾಣ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನ ಸುಧಾರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ಫೋರಂ ಮಾಲ್ ಮುಂಭಾಗ ಬುಲ್ಡೋಜರ್ ಘರ್ಜನೆ
ಇನ್ನು ಬೆಂಗಳೂರಿನಲ್ಲಿ ಒತ್ತುವರಿ (Encroachment) ತೆರವು ಕಾರ್ಯಾಚರಣೆ ಕೂಡ ಜೋರಾಗಿದೆ. ನಗರದ ಫೋರಂ ಮಾಲ್ ಮುಂಭಾಗ ಫುಟ್ಪಾತ್ ಒತ್ತುವರಿ ತೆರವಿಗೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗಿದೆ. ಮಾಲ್ ಆಡಳಿತ ಮಂಡಳಿ ಹಾಗೂ ಬಿಎಂಆರ್ಸಿಎಲ್ ನಡುವಿನ ಜಾಗದ ವಿವಾದದ ನಡುವೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಾಲ್ ಮುಂಭಾಗದ ರಸ್ತೆಯ ಪಕ್ಕದಲ್ಲಿರುವ ಬಿಎಂಆರ್ಸಿಎಲ್ಗೆ ಸೇರಿದ ಖಾಲಿ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಅದು ಬಿಎಂಆರ್ಸಿಎಲ್ ಜಾಗವೆಂದು ಫಲಕ ಹಾಕಲಾಗಿತ್ತು. ಈ ಜಾಗಕ್ಕೆ ಗೇಟ್ ಅಳವಡಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಬುಲ್ಡೋಜರ್ ಮೂಲಕ ಗೇಟ್ ಹಾಗೂ ತಡೆಗೋಡೆ ತೆರವುಗೊಳಿಸಲಾಗಿದೆ.
ಇದರ ಜೊತೆಗೆ ಮಾಲ್ ಆಡಳಿತ ಮಂಡಳಿಯವರು ಫುಟ್ಪಾತ್ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟೆಯ ಮಾದರಿಯಲ್ಲಿ ನಿರ್ಮಿಸಿದ್ದ ಭಾಗವನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಫುಟ್ಪಾತ್ ಒತ್ತುವರಿಯಿಂದ ಸಾರ್ವಜನಿಕರಿಗೆ ಕಿರಿಕಿರಿ
ಮಾಲ್ ಮುಂಭಾಗದ ಫುಟ್ಪಾತ್ನ್ನೇ ಬ್ಲಾಕ್ ಮಾಡಿದ್ದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಸಾರ್ವಜನಿಕರು ಫುಟ್ಪಾತ್ ಬದಲಿಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರ ಓಡಾಟಕ್ಕೂ ಸಮಸ್ಯೆಯಾಗಿತ್ತು ಎಂಬ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಜಿಬಿಎ ಅಧಿಕಾರಿಗಳು ಹಲವು ಬಾರಿ ಸೂಚನೆ ನೀಡಿದ್ದರೂ ಮಾಲ್ ಆಡಳಿತ ಮಂಡಳಿ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸಚಿವರ ಸೂಚನೆಯ ಮೇರೆಗೆ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಈ ಕುರಿತು ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿರುವ ಎಇಇ ರಾಜಣ್ಣ, ಮಾಲ್ ಮುಂಭಾಗದಲ್ಲಿ ಎರಡು ತಡೆಗೋಡೆಗಳನ್ನು ನಿರ್ಮಿಸಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸಲಾಗಿತ್ತು. ಫುಟ್ಪಾತ್ ಸಂಪೂರ್ಣವಾಗಿ ಬ್ಲಾಕ್ ಆಗಿದ್ದರಿಂದ ಜನರಿಗೆ ತೊಂದರೆಯಾಗುತ್ತಿತ್ತು. ಅಧಿಕಾರಿಗಳು ಹಲವು ಬಾರಿ ಸೂಚನೆ ನೀಡಿದರೂ ಸ್ಪಂದನೆ ಸಿಗದ ಹಿನ್ನೆಲೆ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಡೆಮಾಲಿಷನ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.



