ತಿರುವನಂತಪುರಂ: ಹವಾಲಾ ಕೇಸ್ಗೆ (Hawala Case) ಸಂಬಂಧಿಸಿದ ಆರೋಪಿ ಮನೆ ಎಂದು ತಿಳಿದು ಬೇರೊಂದು ಮನೆಗೆ ED (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ (ED Raids) ನಡೆಸಿ, 4 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಘಟನೆ ಕೇರಳಂನ ( Keralam) ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ.
ED ಅಧಿಕಾರಿಗಳು 100 ಕೋಟಿ ರೂ.ಗಳ ಶಂಕಿತ ಹವಾಲಾ ವಹಿವಾಟಿಗೆ ಸಂಬಂಧಿಸಿದ ಆರೋಪಿಯ ಮನೆ ಹುಡುಕುತ್ತಿದ್ದರು. ಈ ವೇಳೆ ನೌಶಾದ್ ಎಂಬವರ ಮನೆಯನ್ನು ಆರೋಪಿ ಮನೆ ಎಂದು ತಪ್ಪಾಗಿ ಭಾವಿಸಿ ಶೋಧಿಸಿದ್ದಾರೆ. ಸುಮಾರು 4 ಗಂಟೆಗಳ ಕಾಲ ಆ ಮನೆಯಲ್ಲಿ ಶೋಧ ನಡೆಸಿ ತೆರಳಿದ್ದಾರೆ.
ನೌಶಾದ್ ಅವರ ತಂದೆಯ ಹೆಸರಿನಲ್ಲಿ ಹೊಂದಾಣಿಕೆಯಾಗದ ಕಾರಣ, ಅಧಿಕಾರಿಗಳಿಗೆ ನೀವು ತಪ್ಪಾದ ವಿಳಾಸಕ್ಕೆ ಬಂದಿದ್ದೀರಿ ಎಂದು ಕುಟುಂಬಸ್ಥರು ಮಾಹಿತಿ ನೀಡಿದರು. ಆದರೆ ಅಧಿಕಾರಿಗಳು ಅವರ ಮಾತು ಕೇಳದೆ ಕಾರ್ಯಾಚರಣೆ ಮುಂದುವರೆಸಿದರು. ಕಾರ್ಯಾಚರಣೆಯ ಕೊನೆಯಲ್ಲಿ ಅಧಿಕಾರಿಗಳು ನಿಜವಾದ ಶಂಕಿತನ ಫೋಟೋ ತೋರಿಸಿದರು ಎಂದು ನೌಶಾದ್ ಮನೆಯವರು ಆರೋಪಿಸಿದ್ದಾರೆ.
ವಿದೇಶಿ ವಿನಿಮಯ ಉಲ್ಲಂಘನೆ ಮತ್ತು ಹವಾಲಾ ವಹಿವಾಟುಗಳ ತನಿಖೆಯ ಭಾಗವಾಗಿ ಶುಕ್ರವಾರ (ನ.20) ರಾಜ್ಯಾದ್ಯಂತ ಸುಮಾರು 12 ಸ್ಥಳಗಳಲ್ಲಿ ನಡೆಸಿದ ಶೋಧಗಳಲ್ಲಿ ಈ ಶೋಧವೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ಶೋಧ ನಡೆಸಲಾಗಿದೆ.
ನೌಶಾದ್ ಕುಟುಂಬ ಹೇಳಿದ್ದೇನು?
ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೋಝಿಕ್ಕೋಡ್ ಜಿಲ್ಲೆಯಲ್ಲಿರುವ ನೌಶಾದ್ ಅವರ ಮನೆಗೆ ಇಡಿ ಅಧಿಕಾರಿಗಳು ಆಗಮಿಸಿದ್ದರು. ಬಳಿಕ 100 ಕೋಟಿ ರೂ. ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನೌಶಾದ್ ಎಂಬ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ಕುಟುಂಬಸ್ಥರ ಬಳಿ ಹೇಳಿದ್ದರು.
ಈ ವೇಳೆ ನೌಶಾದ್ ತಂದೆಯ ಹೆಸರು ಉಸ್ಮಾನ್ ಎಂದಾಗ, ಅವರ ತಂದೆಯ ಹೆಸರು ಉಸ್ಮಾನ್ ಅಲ್ಲ, ಮೊಹಮ್ಮದ್ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ ಅಧಿಕಾರಿಗಳು ವಾಪಸ್ ಹೋಗಲು ನಿರಾಕರಿಸಿದರು. ಮನೆಯನ್ನು ಶೋಧಿಸಲು ನಾವು ಅವರಿಗೆ ಅವಕಾಶ ನೀಡಿದ್ದೆವು. ಅವರು ಹುಡುಕಾಟವನ್ನು ಪೂರ್ಣಗೊಳಿಸಿದರು ಆದರೆ ಏನೂ ಸಿಗಲಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಧಿಕಾರಿಗಳು ಕೊನೆಯಲ್ಲಿ ಹುಡುಕುತ್ತಿದ್ದ ವ್ಯಕ್ತಿಯ ಫೋಟೋ ತೋರಿಸಿದರು. ಆ ವ್ಯಕ್ತಿ ತಮ್ಮ ಮನೆಯಲ್ಲಿ ವಾಸಿಸುತ್ತಿರುವ ನೌಶಾದ್ ಆಗಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ನೌಶಾದ್ ಶಾರ್ಜಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ತೊರೆದು, 9 ತಿಂಗಳ ಹಿಂದೆ ಕೇರಳಕ್ಕೆ ಮರಳಿದ್ದರು. ಅವರು ಪ್ರಸ್ತುತ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಶೋಧ ನಡೆಸುವ ಮೊದಲು ವಿಳಾಸ ಮತ್ತು ಇತರ ಗುರುತಿನ ವಿವರಗಳನ್ನು ಪರಿಶೀಲಿಸಬೇಕಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಕುಟುಂಬದ ಆರೋಪಕ್ಕೆ ಇಡಿ ಅಧಿಕಾರಿಗಳು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
