ನವದೆಹಲಿ: ಪೈಲಟ್ಗಳ ಸುರಕ್ಷತೆ ಹಿನ್ನೆಲೆಯಲ್ಲಿ ದೆಹಲಿಯ ಐಜಿಐ ವಿಮಾನ ನಿಲ್ದಾಣದ (Indira Gandhi International Airport) ಸುತ್ತ 60 ದಿನಗಳ ಕಾಲ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.
ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮಹತ್ವದ ಭದ್ರತಾ ಕ್ರಮಕೈಗೊಂಡಿದ್ದಾರೆ. ಡ್ರೋನ್ಗಳ ಜೊತೆಗೆ ಪ್ಯಾರಾಗ್ಲೈಡರ್, ಹ್ಯಾಂಗ್ಗ್ಲೈಡರ್ ಹಾಗೂ ಇತರೆ ಮಾನವರಹಿತ ವಿಮಾನಗಳ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ನವೆಂಬರ್ 18 ರಿಂದಲೇ ನಿಷೇಧಾಜ್ಞೆ ಜಾರಿಗೆ ಬರಲಿದೆ. 60 ದಿನಗಳ ಕಾಲ, ಅಂದರೆ 2027ರ ಜನವರಿ 16ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಇದನ್ನೂ ಓದಿ: ತಾಜ್ ಮಹಲ್, ನಿಜಾಮುದ್ದೀನ್ ದರ್ಗಾಕ್ಕೆ ಪಾಕ್ ಸಚಿವರ ಭೇಟಿಗೆ ಭಾರತ ನಿರಾಕರಣೆ
ಮಾನವರಹಿತ ವಿಮಾನ ವ್ಯವಸ್ಥೆ ಬಳಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವಿಶ್ವಾಸಾರ್ಹ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇಂತಹ ಸಾಧನಗಳ ಹಾರಾಟದಿಂದ ವಿಮಾನಯಾನ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿದೆ. ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಗಳ ಜೊತೆಗೆ ಜನರ ಜೀವ ರಕ್ಷಣೆಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 163ರ ಅಡಿಯಲ್ಲಿ ಆದೇಶ ಜಾರಿಗೊಳಿಸಲಾಗಿದೆ. ನಿಷೇಧ ಉಲ್ಲಂಘಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 223ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸಿಪಿ ಪ್ರದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಮತ್ತೊಮ್ಮೆ ಹಿನ್ನಡೆ
