ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಮತ್ತೊಮ್ಮೆ ಹಾರಿದ್ದು, ಗೋವಾದಲ್ಲಿ ನಡೆಯಲಿರುವ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ‘ಇಂಡಿಯನ್ ಪನೋರಮಾ – ನಾನ್-ಫೀಚರ್ ಫಿಲ್ಮ್’ (ಕಿರುಚಿತ್ರ) ವಿಭಾಗಕ್ಕೆ ಕನ್ನಡದ ‘ಉಳಿದಿದ್ದು ಸಂಪಿಗೆ ಮಾತ್ರ’ (Ulididdu Sampige Maatra) ಕಿರುಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಅಭಿಷೇಕ್ ಕೆ.ಎಚ್ ನಿರ್ದೇಶನ ಹಾಗೂ ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ಮಾಣದ ಈ ಕಿರುಚಿತ್ರವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದ್ದು, ಇದು ಕನ್ನಡದ ಸ್ವತಂತ್ರ ಸಿನಿಮಾರಂಗಕ್ಕೆ ಸಂದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
1952ರಲ್ಲಿ ಸ್ಥಾಪನೆಯಾದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು (IFFI) ಏಷ್ಯಾದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾಗಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಗೋವಾ ಸರ್ಕಾರ (Goa Govt) ಮತ್ತು ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಸಹಯೋಗದೊಂದಿಗೆ ಆಯೋಜಿಸುವ ಈ ಉತ್ಸವವು ಜಗತ್ತಿನಾದ್ಯಂತದ ಸಿನಿಮಾ ದಿಗ್ಗಜರು ಮತ್ತು ಸಿನಿಪ್ರಿಯರನ್ನು ಒಂದೇ ವೇದಿಕೆಯಡಿ ಬೆಸೆಯುತ್ತದೆ. ಈ ಉತ್ಸವದ ಪ್ರಮುಖ ಆಕರ್ಷಣೆಯಾದ ‘ಇಂಡಿಯನ್ ಪನೋರಮಾ’ ವಿಭಾಗವು ದೇಶದ ಅತ್ಯುತ್ತಮ ಸಿನಿಮಾಗಳನ್ನು ಗೌರವಿಸಿ, ಅವುಗಳನ್ನು ವಿಶ್ವದ ಪ್ರೇಕ್ಷಕರ ಮುಂದಿಡುವ ಮಹತ್ವದ ಕಾರ್ಯ ಮಾಡುತ್ತದೆ. ಈ ಪ್ರತಿಷ್ಠಿತ ವಿಭಾಗಕ್ಕೆ ‘ಉಳಿದಿದ್ದು ಸಂಪಿಗೆ ಮಾತ್ರ’ ಆಯ್ಕೆಯಾಗಿರುವುದು ಚಿತ್ರತಂಡದ ಶ್ರಮಕ್ಕೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ.
ಖ್ಯಾತ ನಟ ದೀಪಕ್ ರೈ ಪಣಾಜೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಜ ಅಭಿನಯದ ಮೂಲಕ ಮನೆಮಾತಾಗಿರುವ ದೀಪಕ್ ರೈ ಅವರು, ‘ಕಾಂತಾರ: ಚಾಪ್ಟರ್ 1’ ಮತ್ತು ‘ಕಾಂತಾರ: ಚಾಪ್ಟರ್ 2’ ಚಿತ್ರಗಳ ಮೂಲಕವೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. ಇವರೊಂದಿಗೆ ರಿಚಿ ಮತ್ತು ಕಾರ್ತಿಕ್ ಸೌಂದರಂ ಚಿತ್ರದ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಕಥೆಗೆ ಜೀವ ತುಂಬಿದ್ದಾರೆ.
ಈ ಕಿರುಚಿತ್ರದ ಹಿಂದಿರುವ ಸೃಜನಶೀಲ ಪ್ರತಿಭೆಗಳ ಪಯಣವೂ ಅಷ್ಟೇ ಕುತೂಹಲಕಾರಿಯಾಗಿದೆ. ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಅಭಿಷೇಕ್ ಕೆ.ಎಚ್, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್ ಡಿಸೈನರ್ ಆಗಿ ಕೆಲಸ ಮಾಡಿ ಸಿನಿಮಾಗಳಿಗೆ ದೃಶ್ಯರೂಪ ನೀಡುತ್ತಿದ್ದರು. ಇದೀಗ ಪೋಸ್ಟರ್ ವಿನ್ಯಾಸದಿಂದ ನಿರ್ದೇಶನದತ್ತ ಹೆಜ್ಜೆ ಇಟ್ಟಿರುವ ಅವರು, ‘ಉಳಿದಿದ್ದು ಸಂಪಿಗೆ ಮಾತ್ರ’ ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮತ್ತೊಂದೆಡೆ, ಮೂರು ಬಾರಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಸಾಗರ್ ಪುರಾಣಿಕ್ ತಮ್ಮ ‘ಪುರಾಣಿಕ್ ಪ್ರೊಡಕ್ಷನ್ಸ್’ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದಾ ಸಾಂಸ್ಕೃತಿಕ ನೈಜತೆ ಮತ್ತು ಗಟ್ಟಿಯಾದ ಕಥಾಹಂದರವುಳ್ಳ ಕೃತಿಗಳನ್ನು ನೀಡುವ ಸಾಗರ್ ಅವರ ನಿರ್ಮಾಣದ ಜಾಣ್ಮೆ ಈ ಚಿತ್ರಕ್ಕೂ ಬಲ ತುಂಬಿದೆ.
ಅಭಿಷೇಕ್ ಕೆ.ಎಚ್ ಮತ್ತು ಸಾಗರ್ ಪುರಾಣಿಕ್ ಅವರ ಈ ಯಶಸ್ವಿ ಜೋಡಿ ಕೇವಲ ಕಿರುಚಿತ್ರಕ್ಕೆ ಸೀಮಿತವಾಗದೆ, ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ ಸಿನಿಮಾವೊಂದನ್ನು ತೆರೆಗೆ ತರಲು ಸಜ್ಜಾಗಿದೆ. ಅಭಿಷೇಕ್ ಅವರ ನಿರ್ದೇಶನದ ದೃಷ್ಟಿಕೋನ ಹಾಗೂ ಸಾಗರ್ ಅವರ ನಿರ್ಮಾಣದ ಅನುಭವ ಈ ಹೊಸ ಪ್ರಾಜೆಕ್ಟ್ನಲ್ಲಿ ಒಂದಾಗಲಿದ್ದು, ವಿಶೇಷವೆಂದರೆ ಸಾಗರ್ ಪುರಾಣಿಕ್ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಹೊಸ ಸಿನಿಮಾದ ವಿವರಗಳನ್ನು ಗೌಪ್ಯವಾಗಿಡಲಾಗಿದ್ದರೂ, 57ನೇ IFFI ವೇದಿಕೆಯಲ್ಲಿ ‘ಉಳಿದಿದ್ದು ಸಂಪಿಗೆ ಮಾತ್ರ’ ಕಿರುಚಿತ್ರದ ಆಯ್ಕೆಯು ಈ ಜೋಡಿಯ ಭವಿಷ್ಯದ ಪಯಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ.

