– ಹಿರಿಯ ಕ್ರಿಕೆಟಿಗರಾದ ರವಿಶಾಸ್ತ್ರಿ, ವಸೀಂ ಜಾಫರ್ ಕೂಡ ಬೇಸರ
ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನ ಆಯ್ಕೆ ಮಾಡದಿರುವುದಕ್ಕೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ (Imran Masood) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದ್ದರೂ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸ್ಪಷ್ಟ ತಾರತಮ್ಯವನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
#WATCH | Delhi: On Cricketer Mohammed Siraj, Congress MP Imran Masood says, “It is being said that despite his good performance, he was not given a place in the team. His name is ‘Siraj ‘, and that is why he was not given a place. If you are not selecting him despite his good performance, the discrimination is clear.”
— ANI (@ANI) November 20, 2026
ಶುಭಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ (Team India) ಈ ಪಂದ್ಯದಲ್ಲಿ ನಾಲ್ವರು ವೇಗದ ಬೌಲರ್ಗಳೊಂದಿಗೆ ಕಣಕ್ಕಿಳಿದಿದೆ. ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಹಾಗೂ ಅನ್ಶುಲ್ ಕಾಂಬೋಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಉತ್ತಮ ಅನುಭವ ಹಾಗೂ ಸ್ಥಿರ ಪ್ರದರ್ಶನ ಹೊಂದಿರುವ ಸಿರಾಜ್ ಅವರನ್ನು ಕೈಬಿಟ್ಟಿರುವ ನಿರ್ಧಾರಕ್ಕೆ ಹಲವು ಕ್ರಿಕೆಟ್ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ʻಕೈʼ ಸಂಸದ ಇಮ್ರಾನ್ ಮಸೂದ್, ʻಉತ್ತಮ ಪ್ರದರ್ಶನ ನೀಡಿದ್ದರೂ ಅವರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಅವರ ಹೆಸರು ‘ಸಿರಾಜ್’ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡಿಲ್ಲ. ಉತ್ತಮ ಪ್ರದರ್ಶನದ ಹೊರತಾಗಿಯೂ ಅವರನ್ನು ಆಯ್ಕೆ ಮಾಡದಿದ್ದರೆ ತಾರತಮ್ಯ ಸ್ಪಷ್ಟವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಭಾರತದ ಶ್ರೀಲಂಕಾ ಪ್ರವಾಸದ ವೇಳೆ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ ಆಡಿದ್ದರು. ಆದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಭಾರತ ನಾಲ್ವರು ವೇಗದ ಬೌಲರ್ಗಳು ಹಾಗೂ ಸ್ಪಿನ್ ಆಯ್ಕೆಯಾಗಿ ವಾಷಿಂಗ್ಟನ್ ಸುಂದರ್ ಅವರನ್ನ ಕಣಕ್ಕಿಳಿಸಿದೆ.
ಸಿರಾಜ್ ಕೈಬಿಟ್ಟ ನಿರ್ಧಾರಕ್ಕೆ ರವಿಶಾಸ್ತ್ರಿ ಬೇಸರ
ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ನ್ಯೂಜಿಲೆಂಡ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವೇಗದ ಬೌಲಿಂಗ್ ಹಾಗೂ ಚೆಂಡಿನ ಸ್ವಿಂಗ್ಗೆ ಹೆಚ್ಚಿನ ನೆರವು ಸಿಗುತ್ತಿರುವಾಗ ಅನುಭವಿ ಸಿರಾಜ್ ಅವರನ್ನ ಏಕೆ ಆಯ್ಕೆ ಮಾಡಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ರವಿಶಾಸ್ತ್ರಿ, ಭಾರತ ತಂಡ ಬಲವಾಗಿ ತಿರುಗೇಟು ನೀಡಲಿ ಎಂದು ಆಶಿಸುತ್ತೇನೆ. ಆದರೆ, ವೇಗ, ಕೌಶಲ್ಯ ಮತ್ತು ಚೆಂಡಿನ ಸ್ವಿಂಗ್ ಮಾನದಂಡಗಳಾಗಿದ್ದರೆ, 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವವರ ಕೊರತೆ ಇದ್ದಾಗ ಒಂದು ಪ್ರಶ್ನೆ ಕೇಳಲೇಬೇಕಾಗುತ್ತದೆ. ಮೊಹಮ್ಮದ್ ಸಿರಾಜ್ ಎಲ್ಲಿ? ಅವರ ಅನುಭವ, ಆಕ್ರಮಣಕಾರಿ ಮನೋಭಾವ ಹಾಗೂ ಚೆಂಡಿನ ಮೂಲಕ ಪಂದ್ಯದಲ್ಲಿ ಬದಲಾವಣೆ ತರುವ ಸಾಮರ್ಥ್ಯ ಖಂಡಿತವಾಗಿಯೂ ಮಹತ್ವದ್ದಲ್ಲವೇ? ಎಂದು ಬರೆದುಕೊಂಡಿದ್ದಾರೆ.
ಇನ್ನು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಕೂಡ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಿರುವುದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಸಿರಾಜ್ ಅವರನ್ನು ಕೈಬಿಟ್ಟಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ‘ಎಕ್ಸ್’ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಬುಮ್ರಾ ಬೆಂಕಿ ಬೌಲಿಂಗ್ ದಾಳಿ ನೆರವಿನಿಂದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 368 ರನ್ಗಳಿಗೆ ಆಲೌಟ್ ಆಗಿದೆ. ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ 159 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದೆ.


