ವಾಷಿಂಗ್ಟನ್: ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್(Elon Musk) ಒಡೆತನದ ಸ್ಪೇಸ್ಎಕ್ಸ್ (SpaceX) ಸಂಸ್ಥೆಯು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ಬೃಹತ್ ರಾಕೆಟ್ ವ್ಯವಸ್ಥೆಯಾದ ‘ಸ್ಪೇಸ್ಎಕ್ಸ್ ಸ್ಟಾರ್ಶಿಪ್’ (Starship) ಅನ್ನು ಸಮುದ್ರದಲ್ಲಿ ಇಳಿಸುವ ಬದಲು, ನೇರವಾಗಿ ಉಡಾವಣಾ ಸ್ಥಳದಲ್ಲೇ (Launchpad) ಅತ್ಯಂತ ಸುರಕ್ಷಿತವಾಗಿ ಮತ್ತು ನಿಖರವಾಗಿ ಭೂಮಿಗೆ ಇಳಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಸ್ಪೇಸ್ಎಕ್ಸ್ ಸ್ಟಾರ್ಶಿಪ್ ಬಾಹ್ಯಾಕಾಶ ನೌಕೆಯು ತನ್ನ 15ನೇ ಪರೀಕ್ಷಾ ಹಾರಾಟದ (Flight 15) ನಂತರ ಮೊದಲ ಬಾರಿಗೆ ಯಶಸ್ವಿಯಾಗಿ ಉಡಾವಣಾ ಗೋಪುರದಲ್ಲಿ (Launch Tower) ಲ್ಯಾಂಡ್ ಆಗಿದೆ. ಸುಮಾರು 22.5 ಗಂಟೆಗಳ ಕಾಲ ಕಕ್ಷೆಯಲ್ಲಿ ಸುತ್ತಿದ ನಂತರ, ನೌಕೆಯು ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿ ಟೆಕ್ಸಾಸ್ನ ಸ್ಟಾರ್ಬೇಸ್ನಲ್ಲಿರುವ ಗೋಪುರದ ಯಾಂತ್ರಿಕ ತೋಳುಗಳ ನಡುವೆ ನಿಖರವಾಗಿ ನಿಲ್ಲಿಸಲಾಗಿದೆ.
ಐತಿಹಾಸಿಕ ಲ್ಯಾಂಡಿಂಗ್ ಹೇಗಾಯ್ತು?
ನವೆಂಬರ್ 13 ರಂದು ಉಡಾವಣೆಯಾದ ಶಿಪ್ 42 (Ship 42), ಸುಮಾರು 260 ಕಿ.ಮೀ ಎತ್ತರದಲ್ಲಿ ಭೂಮಿಗೆ 14 ಸುತ್ತುಗಳನ್ನು ಹಾಕಿತು ಮತ್ತು 26 ಸ್ಟಾರ್ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು. ಗಂಟೆಗೆ 17,000 ಮೈಲಿಗೂ ಅಧಿಕ ವೇಗದಲ್ಲಿ ಚಲಿಸುತ್ತಿದ್ದ ನೌಕೆಯು ತನ್ನ ಎಂಜಿನ್ ಒಂದನ್ನು ಸ್ವಲ್ಪ ಸಮಯ ಉರಿಸಿ ಭೂಮಿಯತ್ತ ಇಳಿಯಲು ಆರಂಭಿಸಿತು.
Mechazilla catches Starship! Congratulations to the entire SpaceX team on this incredible achievement! https://t.co/YJzmGUZb2B
— SpaceX (@SpaceX) November 14, 2026
ವಾತಾವರಣವನ್ನು ತಲುಪಿದಾಗ, ನೌಕೆಯ ಮುಂಭಾಗ ಮತ್ತು ಹಿಂಭಾಗದ ರೆಕ್ಕೆಗಳು ನೌಕೆಯನ್ನು ನಿಖರವಾಗಿ ಟೆಕ್ಸಾಸ್ನ ಸ್ಟಾರ್ಬೇಸ್ ಉಡಾವಣಾ ಕೇಂದ್ರದತ್ತ ನಿರ್ದೇಶಿಸಿದವು. ನೆಲಕ್ಕೆ ಸಮೀಪಿಸುತ್ತಿದ್ದಂತೆ, ಸ್ಟಾರ್ಶಿಪ್ ತನ್ನ ರಾಪ್ಟರ್ ಎಂಜಿನ್ಗಳನ್ನು ಪುನಃ ಚಾಲನೆಗೊಳಿಸಿ ಅಡ್ಡಲಾಗಿ ಬೀಳುತ್ತಿದ್ದ ಸ್ಥಿತಿಯಿಂದ ನೇರವಾಗಿ ಲಂಬ (Vertical) ಸ್ಥಿತಿಗೆ ತಿರುಗಿತು.
ಎಂಜಿನ್ಗಳ ಸಹಾಯದಿಂದ ತನ್ನ ವೇಗವನ್ನು ಸಂಪೂರ್ಣವಾಗಿ ತಗ್ಗಿಸಿದ ಸ್ಟಾರ್ಶಿಪ್, ಲಾಂಚ್ ಪ್ಯಾಡ್-2 ರ ಗೋಪುರದ ಬಳಿ ಗಾಳಿಯಲ್ಲಿ ತೇಲುತ್ತಾ ನಿಧಾನವಾಗಿ ಕೆಳಗಿಳಿಯಿತು.
ಈ ಅಪರೂಪದ ಯಶಸ್ಸು ಬಾಹ್ಯಾಕಾಶ ಯಾನದ ದಿಕ್ಕನ್ನೇ ಬದಲಿಸಲಿದ್ದು, ಸಂಪೂರ್ಣ ಮರುಬಳಕೆ (Fully Reusable) ರಾಕೆಟ್ ತಂತ್ರಜ್ಞಾನದ ಮೂಲಕ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ.
ಈ ಸಾಧನೆ ಏಕೆ ವಿಶೇಷ?
ಈ ಹಿಂದೆ ಸ್ಪೇಸ್ಎಕ್ಸ್ ಸಂಸ್ಥೆಯು ತನ್ನ ‘ಫಾಲ್ಕನ್-9’ (Falcon 9) ರಾಕೆಟ್ಗಳನ್ನು ಉಡಾವಣೆ ಮಾಡಿ, ಮಿಷನ್ ಪೂರ್ಣಗೊಂಡ ಬಳಿಕ ಅದರ ಕೆಳಭಾಗವನ್ನು ಮಾತ್ರ ಸುರಕ್ಷಿತವಾಗಿ ಭೂಮಿಗೆ ಇಳಿಸುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿತ್ತು. ಆದರೆ, ಫಾಲ್ಕನ್ ರಾಕೆಟ್ಗಳಿಗೆ ಹೋಲಿಸಿದರೆ ‘ಸ್ಪೇಸ್ಎಕ್ಸ್ ಸ್ಟಾರ್ಶಿಪ್’ ಅತ್ಯಂತ ಬೃಹತ್ ಗಾತ್ರದ ಮತ್ತು ಅತಿ ಭಾರವಾದ ರಾಕೆಟ್ ಸಿಸ್ಟಂ ಆಗಿದೆ.
ಇದೀಗ ಸ್ಟಾರ್ಶಿಪ್ನ ಬೂಸ್ಟರ್ ಜೊತೆಗೆ ಮೇಲ್ಭಾಗವನ್ನೂ (Upper Stage) ಸಂಪೂರ್ಣವಾಗಿ ಸುರಕ್ಷಿತವಾಗಿ ಹಿಡಿಯುವಲ್ಲಿ (Catch) ಸಂಸ್ಥೆ ಯಶಸ್ವಿಯಾಗಿದೆ. ಇದರಿಂದ ಇಡೀ ರಾಕೆಟ್ ವ್ಯವಸ್ಥೆಯೇ ಯಾವುದೇ ಹಾನಿಯಿಲ್ಲದೆ ಮತ್ತೆ ಮರುಬಳಕೆಗೆ ಲಭ್ಯವಾಗಲಿದೆ.
Ship 42 looks great! https://t.co/ChJcdWiuuS
— Elon Musk (@elonmusk) November 14, 2026
ಸಾಮಾನ್ಯವಾಗಿ ಬೃಹತ್ ರಾಕೆಟ್ಗಳ ಪರೀಕ್ಷಾರ್ಥ ಉಡಾವಣೆಯ ನಂತರ ಅವುಗಳನ್ನು ಸಾಗರದಲ್ಲಿ ಇಳಿಸಲಾಗುತ್ತಿತ್ತು. ಆದರೆ, ಈ ಬಾರಿ ಸ್ಟಾರ್ಶಿಪ್ ರಾಕೆಟ್ ಅನ್ನು ನೇರವಾಗಿ ಉಡಾವಣಾ ಕೇಂದ್ರದಲ್ಲೇ ಇರುವ ದೈತ್ಯ ಯಾಂತ್ರಿಕ ತೋಳುಗಳ (Mechazilla) ಸಹಾಯದಿಂದ ಗಾಳಿಯಲ್ಲೇ ಹಿಡಿದು ನಿಲ್ಲಿಸಲಾಗಿದೆ. ಇದು ರಾಕೆಟ್ ಅನ್ನು ಅತಿ ಕಡಿಮೆ ಅವಧಿಯಲ್ಲಿ ಮರು-ಉಡಾವಣೆಗೆ ಸಿದ್ಧಪಡಿಸಲು ನೆರವಾಗುತ್ತದೆ.
ಬಾಹ್ಯಾಕಾಶ ಯಾನಕ್ಕೆ ಹೊಸ ವೇಗ:
ರಾಕೆಟ್ಗಳ ತಯಾರಿಕೆಗೆ ಕೋಟ್ಯಂತರ ಡಾಲರ್ ವೆಚ್ಚವಾಗುತ್ತದೆ. ಒಮ್ಮೆ ಬಳಸಿದ ರಾಕೆಟ್ ನಾಶವಾದರೆ ಬಾಹ್ಯಾಕಾಶ ಯೋಜನೆಗಳು ಅತ್ಯಂತ ದುಬಾರಿಯಾಗುತ್ತವೆ. ಆದರೆ, ವಿಮಾನಗಳಂತೆಯೇ ರಾಕೆಟ್ಗಳನ್ನೂ ಪದೇ ಪದೇ ಬಳಸುವ (ಮರುಬಳಕೆ) ಎಲಾನ್ ಮಸ್ಕ್ ಅವರ ಕನಸು ಇದೀಗ ನನಸಾಗುತ್ತಿದೆ. ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಮಾನವರನ್ನು ಚಂದ್ರನ ಮೇಲೆ ಕಳುಹಿಸುವ ನಾಸಾದ ಆರ್ಟೆಮಿಸ್ (Artemis) ಯೋಜನೆಗೆ ಹಾಗೂ ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವ ಸ್ಪೇಸ್ಎಕ್ಸ್ನ ಮಹತ್ವಾಕಾಂಕ್ಷಿ ಗುರಿಗೆ ದೊಡ್ಡ ಬಲ ನೀಡಲಿದೆ.
