ಬೆಂಗಳೂರು/ರಾಮನಗರ: ಮಾಜಿ ಸಚಿವ ಡಿ. ಸುಧಾಕರ್(D Sudhakar) ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ(Hiriyur By Election) ದಿನಾಂಕ ಘೋಷಣೆಯಾಗುವ ಮುನ್ನವೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿವೆ. ವಿಶೇಷವಾಗಿ, ವಿಪಕ್ಷ ಮೈತ್ರಿಕೂಟವಾದ ಬಿಜೆಪಿ(BJP) ಮತ್ತು ಜೆಡಿಎಸ್(JDS) ನಡುವೆ ಟಿಕೆಟ್ ಹಂಚಿಕೆ ವಿಚಾರವಾಗಿ ಬಹಿರಂಗವಾಗಿಯೇ ಅಸಮಾಧಾನದ ಹೊಗೆಯಾಡಲು ಶುರುವಾಗಿದೆ.
ಮೊದಲಿನಿಂದಲೂ ಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ದಳಪತಿಗಳ ಪಾಳಯದಲ್ಲಿ ಜೋರಾಗಿತ್ತು. ಆದರೆ, ವಿಪಕ್ಷ ನಾಯಕ ಆರ್. ಅಶೋಕ್(R Ashok) ಅವರು “ಹಿರಿಯೂರು ಟಿಕೆಟ್ ಬಿಜೆಪಿಗೆ ಎಂದು ನಮ್ಮ ಪಕ್ಷದಲ್ಲಿ ತೀರ್ಮಾನವಾಗಿದೆ” ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಅಶೋಕ್ ಅವರ ಈ ಏಕಪಕ್ಷೀಯ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದೋಸ್ತಿ ಪಕ್ಷಗಳ ಈ ಮುಸುಕಿನ ಗುದ್ದಾಟ ಆಡಳಿತಾರೂಢ ಕಾಂಗ್ರೆಸ್ಗೆ ವರದಾನವಾಗಲಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಅಶೋಕ್ ಹೇಳಿದ್ದೇನು?
ಹಿರಿಯೂರು ಟಿಕೆಟ್ ವಿಚಾರವಾಗಿ ಮಾತನಾಡಿದ ಆರ್. ಅಶೋಕ್, “ರಾಜ್ಯ ಬಿಜೆಪಿಯಲ್ಲಿ ಹಿರಿಯೂರು ಕ್ಷೇತ್ರದ ಟಿಕೆಟ್ ನಮ್ಮ ಪಕ್ಷಕ್ಕೇ ಎಂಬ ತೀರ್ಮಾನವಾಗಿದೆ. ಈ ಕುರಿತು ನಾನು ಹಾಗೂ ನಮ್ಮ ನಾಯಕರು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುತ್ತೇವೆ. ಅಂತಿಮವಾಗಿ ಕೇಂದ್ರದ ವರಿಷ್ಠರು ಜೆಡಿಎಸ್ ಮನವೊಲಿಸಿ ಬಿಜೆಪಿಗೇ ಟಿಕೆಟ್ ನೀಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಇದೇ ವೇಳೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಹೊಂದಾಣಿಕೆ ಆಗಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ ರಾಜ್ಯದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ರಾಜಕೀಯ ವಾತಾವರಣವಿದೆ. ಈ ಬಗ್ಗೆ ಸಮನ್ವಯ ಸಮಿತಿ ಸಭೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅಂತಿಮವಾಗಿ ಕೇಂದ್ರ ಬಿಜೆಪಿ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ” ಎಂದರು.
ಹೆಚ್ಡಿಕೆ ತಿರುಗೇಟು:
ಜೆಡಿಎಸ್ ಮನವೊಲಿಸಿ ಬಿಜೆಪಿಗೆ ಟಿಕೆಟ್ ಪಡೆಯುತ್ತೇವೆ ಎಂಬ ಆರ್. ಅಶೋಕ್ ಅವರ ಹೇಳಿಕೆಗೆ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, “ಹಿರಿಯೂರಿನಲ್ಲಿ ವಾಸ್ತವ ಪರಿಸ್ಥಿತಿ ಏನಿದೆ ಎಂಬುದನ್ನು ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು. ನನಗೆ ಇಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಆದರೆ, ಆ ಉಪಚುನಾವಣೆಯನ್ನು ಗೆದ್ದರೆ ಮಾತ್ರ ಮುಂದಿನ ರಾಜಕೀಯ ಭವಿಷ್ಯ ಏನೆಂಬುದು ತಿಳಿಯಲಿದೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
“ಅಲ್ಲಿ ಜೆಡಿಎಸ್ ನಿಲ್ಲಬೇಕೋ ಅಥವಾ ಬಿಜೆಪಿ ನಿಲ್ಲಬೇಕೋ ಎಂಬುದು ಮುಖ್ಯ ಪ್ರಶ್ನೆಯಲ್ಲ. ಹಿರಿಯೂರು ಕ್ಷೇತ್ರದ ಜನರ ಭಾವನೆ ಮತ್ತು ಅಭಿಪ್ರಾಯಕ್ಕೆ ನಾವು ಗೌರವ ಕೊಡಬೇಕು. ಕ್ಷೇತ್ರದ ವಾಸ್ತವಿಕತೆಯನ್ನು ಅರಿತು ಗೆಲ್ಲುವ ತಂತ್ರಗಾರಿಕೆ ರೂಪಿಸುವುದು ಎರಡೂ ಪಕ್ಷಗಳ ಜವಾಬ್ದಾರಿಯಾಗಿದೆ” ಎನ್ನುವ ಮೂಲಕ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
