– ಮಲ್ಲೇಶ್ವರಂನಲ್ಲಿ ಅಭ್ಯರ್ಥಿಗಳ ಪರದಾಟ!
ಬೆಂಗಳೂರು: ಇಂದು ನಡೆಯುತ್ತಿರುವ ಕೆಎಎಸ್ ಪರೀಕ್ಷೆ ಹಿನ್ನೆಲೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಮಲ್ಲೇಶ್ವರಂ 18ನೇ ಕ್ರಾಸ್ನಲ್ಲಿರುವ ಪಿಯು ಪದವಿ ಪೂರ್ವ ಕಾಲೇಜು ಸೇರಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಪೊಲೀಸರು ಭದ್ರತಾ ಪರಿಶೀಲನೆ ನಡೆಸಿದ್ದಾರೆ. ಒಂದು ಕೊಠಡಿಯಲ್ಲಿ ಕೇವಲ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಪರೀಕ್ಷಾ ಅಕ್ರಮ ತಡೆಗಟ್ಟಲು ಜಾಮರ್ಗಳನ್ನೂ ಅಳವಡಿಸಲಾಗಿದೆ.

2 ಹಂತದಲ್ಲಿ ಅಭ್ಯರ್ಥಿಗಳ ತಪಾಸಣೆ
ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಪ್ರತಿಯೊಬ್ಬ ಅಭ್ಯರ್ಥಿಯನ್ನೂ ಎರಡು ಹಂತಗಳಲ್ಲಿ ಪರಿಶೀಲಿಸಿ ಒಳಗೆ ಕಳುಹಿಸಲಾಗುತ್ತಿದೆ. ಮಹಿಳಾ ಅಭ್ಯರ್ಥಿಗಳಿಗೆ ತಾಳಿ ಮತ್ತು ಕಾಲುಂಗುರ ಧರಿಸಲು ಮಾತ್ರ ಅವಕಾಶ ನೀಡಲಾಗಿದೆ. ಕಿವಿ, ಕನ್ನಡಕ, ಶರ್ಟ್ ಕಾಲರ್, ಚಪ್ಪಲಿ ಹಾಗೂ ವಾಚ್ಗಳನ್ನೂ ಪರಿಶೀಲಿಸಲಾಗುತ್ತಿದ್ದು, ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಗೆ ಅವಕಾಶ ನೀಡಲಾಗಿಲ್ಲ.
ಫುಲ್ ಶರ್ಟ್ ಅಭ್ಯರ್ಥಿಗಳ ಪರದಾಟ
ಇನ್ನೂ ಮಲ್ಲೇಶ್ವರಂ ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಫುಲ್ ಶರ್ಟ್ ಧರಿಸಿ ಬಂದ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಸಿಬ್ಬಂದಿ ಅಭ್ಯರ್ಥಿಯೊಬ್ಬರನ್ನ ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಿದ್ದು, ಬಳಿಕ ತಂದೆಯೊಂದಿಗೆ ಹೊರಗೆ ಬಂದು ಬಟ್ಟೆ ಬದಲಾಯಿಸಿಕೊಂಡು ಮತ್ತೆ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಶರ್ಟ್ ಕತ್ತರಿಸಲು ಒಪ್ಪದ ಹಿನ್ನೆಲೆ ಶರ್ಟ್ ಕತ್ತರಿಸದೇ ಬನಿಯನ್ನಲ್ಲೇ ಪರೀಕ್ಷೆ ಬರೆಯಲು ತೆರಳಿದ್ದಾರೆ. ಮಾರ್ಗಸೂಚಿ ಪಾಲಿಸದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಪರದಾಡುವಂತಾಗಿದೆ.

ಗೇಟ್ ಬಂದ್, ಪರೀಕ್ಷೆ ಆರಂಭ
ಸದ್ಯ ಪರೀಕ್ಷಾ ಕೇಂದ್ರಗಳ ಗೇಟ್ ಬಂದ್ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಮೊದಲ ಪತ್ರಿಕೆ ಆರಂಭವಾಗಿದೆ. ಮೊದಲ ಪತ್ರಿಕೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ನಡೆಯಲಿದ್ದು, 2ನೇ ಪತ್ರಿಕೆ ಮಧ್ಯಾಹ್ನ 2 ರಿಂದ ಸಂಜೆ 4ರ ವರೆಗೆ ನಡೆಯಲಿದೆ.
