ಹಾಸನ: ಅನಾರೋಗ್ಯದಿಂದ ಹಾಸನ (Hassan) ಮೂಲದ ಬಿಎಸ್ಎಫ್ ಯೋಧರೊಬ್ಬರು (BSF Soldier) ನಿಧನರಾಗಿರುವ ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.
ಹಾಸನ ತಾಲೂಕಿನ ಕಳ್ಳಿಕೊಪ್ಪಲು ಗ್ರಾಮದ ಕುಮಾರಸ್ವಾಮಿ (42) ಮೃತ ಯೋಧ. ಕುಮಾರಸ್ವಾಮಿಯವರು ತಮ್ಮ ಸೇವಾವಧಿ ಮುಗಿದಿದ್ದರೂ ಹೆಚ್ಚುವರಿ ಸೇವೆ ಸಲ್ಲಿಸುತ್ತಿದ್ದರು. ಅವರು ಪಿತೃಪಕ್ಷ ಹಬ್ಬಕ್ಕೆ ಬಂದಿದ್ದ ವೇಳೆ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಸ್ವಲ್ಪ ಗುಣಮಖರಾದ ಬಳಿಕ ಮತ್ತೆ ಕರ್ತವ್ಯಕ್ಕೆ ವಾಪಸ್ ಆಗಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಕೇಸ್ – 6 ಶಂಕಿತರು ವಶಕ್ಕೆ
ಚಂಡೀಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ನ.11 ರಂದು ಸಂಜೆ 6 ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು (ನ.13) ಬೆಳಿಗ್ಗೆ ಮೃತ ಯೋಧನ ಪಾರ್ಥಿವ ಶರೀರವನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರಲಾಯಿತು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ ಹಾಗೂ ಮಾಜಿ ಯೋಧರ ಸಂಘದ ಅಧ್ಯಕ್ಷ ನಾಗೇಶ್ ಅವರು ಗೌರವ ಸಲ್ಲಿಸಿ ಮೃತ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಹಾಸನದ ವಿಜಯನಗರದಲ್ಲಿ ಕುಮಾರಸ್ವಾಮಿ ಹಾಗೂ ಕುಟುಂಬ ನೆಲೆಸಿದೆ. ಕುಮಾರಸ್ವಾಮಿಯವರು ಮೂರು ವರ್ಷದ ಪುತ್ರಿ, ಪತ್ನಿ, ತಂದೆಯವರನ್ನು ಅಗಲಿದ್ದಾರೆ. ಜಮ್ಮು, ಪಶ್ಚಿಮಬಂಗಾಳ, ನಾಗ್ಪುರ್, ರಾಜಸ್ಥಾನ್, ಹರಿಯಾಣದಲ್ಲಿ ಅವರು ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ದಿಲ್ಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – WHO ಮಿತಿಗಿಂತ ಹಲವು ಪಟ್ಟು ಹೆಚ್ಚಿದ ಪಿಎಂ 2.5 ಪ್ರಮಾಣ
