ವಾಷಿಂಗ್ಟನ್: ಶಂಕಿತ ಚೀನೀ ಗೂಢಚಾರಣಿ,ವಿವಾಹೇತರ ಸಂಬಂಧಗಳ ಆರೋಪ ಮತ್ತು ತೀವ್ರ ವಿವಾದದ ಹಿನ್ನೆಲೆಯಲ್ಲಿ ಜಾಗತಿಕ ಚಿಪ್ ದೈತ್ಯ ಎನ್ವಿಡಿಯಾ (Nvidia) ಸಂಸ್ಥೆಯ ದೀರ್ಘಕಾಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಜೇನ್ಸೆನ್ ಹುವಾಂಗ್(Jensen Huang) ರಾಜೀನಾಮೆ ನೀಡಿದ್ದಾರೆ. ಇದೀಗ ಕಂಪನಿಗೆ ಕಾಯಂ ಉತ್ತರಾಧಿಕಾರಿಯನ್ನು ಹುಡುಕುವ ಪ್ರಕ್ರಿಯೆ ಆರಂಭವಾಗಿದ್ದು, ಈ ರೇಸ್ನಲ್ಲಿ ಮೂವರು ಭಾರತೀಯ ಮೂಲದ ಟೆಕ್ ದಿಗ್ಗಜರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಹುವಾಂಗ್ ನಿರ್ಗಮನದ ನಂತರ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (CFO) ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಎನ್ವಿಡಿಯಾವನ್ನು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಶಕ್ತಿಕೇಂದ್ರವಾಗಿ ಬೆಳೆಸಿದ ಹುವಾಂಗ್ ಸ್ಥಾನವನ್ನು ತುಂಬಲು ಸಂಸ್ಥೆಯ ಆಂತರಿಕ ಹಾಗೂ ಹೊರಗಿನ ಅಭ್ಯರ್ಥಿಗಳನ್ನು ಪರಿಗಣಿಸಲು ಆಡಳಿತ ಮಂಡಳಿ ಮುಕ್ತವಾಗಿದೆ ಎಂದು ಕಂಪನಿ ತಿಳಿಸಿದೆ. ತಂತ್ರಜ್ಞಾನದ ಆಳವಾದ ಜ್ಞಾನ, ದೂರದೃಷ್ಟಿ, ಆರ್ಥಿಕ ಚಾಣಾಕ್ಷತೆ ಹಾಗೂ ಭೌಗೋಳಿಕ ರಾಜಕೀಯ ಒತ್ತಡಗಳನ್ನು ನಿಭಾಯಿಸುವ ಅನುಭವವಿರುವ ನಾಯಕನನ್ನು ಹೂಡಿಕೆದಾರರು ಎದುರು ನೋಡುತ್ತಿದ್ದಾರೆ.

ರೇಸ್ನಲ್ಲಿರುವ ಮೂವರು ಭಾರತೀಯರು
ಸಂಜಯ್ ಮೆಹ್ರೋತ್ರಾ – ಮೈಕ್ರಾನ್ ಸಿಇಒ
ಮೆಮೊರಿ ಚಿಪ್ ತಯಾರಕ ಸಂಸ್ಥೆ ಮೈಕ್ರಾನ್ (Micron) ಸಿಇಒ ಸಂಜಯ್ ಮೆಹ್ರೋತ್ರಾ(Sanjay Mehrotra) ಈ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಇವರು, ಎನ್ವಿಡಿಯಾದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. 2017ರಿಂದ ಅಮೆರಿಕದ ಅತಿದೊಡ್ಡ ಮೆಮೊರಿ ಚಿಪ್ ಕಂಪನಿಯನ್ನು ಮುನ್ನಡೆಸುತ್ತಿರುವ ಇವರು, ಎಐ ಸರ್ವರ್ಗಳಿಗೆ ಬೇಕಾದ ಹೈ-ಬ್ಯಾಂಡ್ವಿಡ್ತ್ ಮೆಮೊರಿ ಚಿಪ್ಗಳ ತಯಾರಿಕೆಯತ್ತ ಕಂಪನಿಯನ್ನು ಕೊಂಡೊಯ್ದು ಸುಮಾರು 1 ಟ್ರಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯನ್ನಾಗಿ ಬೆಳೆಸಿದ್ದಾರೆ. ಇದಕ್ಕೂ ಮುನ್ನ 1988ರಲ್ಲಿ ಸ್ಯಾನ್ಡಿಸ್ಕ್ (SanDisk) ಸಹ-ಸಂಸ್ಥಾಪಕರಾಗಿ, 2011ರಿಂದ 2016ರವರೆಗೆ ಅದರ ಸಿಇಒ ಆಗಿಯೂ ಸೇವೆ ಸಲ್ಲಿಸಿದ್ದರು.

ನಿಕೇಶ್ ಅರೋರಾ – ಪಾಲೋ ಆಲ್ಟೊ ನೆಟ್ವರ್ಕ್ಸ್ ಸಿಇಒ
ಪಾಲೋ ಆಲ್ಟೊ ನೆಟ್ವರ್ಕ್ಸ್ (Palo Alto Networks) ಸಿಇಒ ನಿಕೇಶ್ ಅರೋರಾ(Nikesh Arora) ಅವರ ಹೆಸರನ್ನೂ ಹೂಡಿಕೆದಾರರು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. 2018ರಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಅರೋರಾ, ಎಐ ಆಧಾರಿತ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಕಂಪನಿಯ ವಿಸ್ತರಣೆಗೆ ಕಾರಣರಾಗಿದ್ದಾರೆ. ಈ ಹಿಂದೆ ಸಾಫ್ಟ್ಬ್ಯಾಂಕ್ನ (SoftBank) ಅಧ್ಯಕ್ಷ ಮತ್ತು ಸಿಒಒ ಆಗಿ ಹಾಗೂ ಗೂಗಲ್ನಲ್ಲಿ ಒಂದು ದಶಕ ಕಾಲ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಆದರೆ, ಚಿಪ್ ಅಭಿವೃದ್ಧಿಗಿಂತ ಸೈಬರ್ ಸೆಕ್ಯುರಿಟಿ ಮತ್ತು ಇತರ ಟೆಕ್ ಕ್ಷೇತ್ರಗಳಲ್ಲಿ ಇವರ ಅನುಭವ ಹೆಚ್ಚಿದೆ.

ಥಾಮಸ್ ಕುರಿಯನ್ -ಗೂಗಲ್ ಕ್ಲೌಡ್ ಸಿಇಒ)
ಗೂಗಲ್ ಕ್ಲೌಡ್ (Google Cloud) ಸಿಇಒ ಥಾಮಸ್ ಕುರಿಯನ್(Thomas Kurian) ಕೂಡ ಎನ್ವಿಡಿಯಾ ಉನ್ನತ ಹುದ್ದೆಗೆ ಪರಿಗಣಿಸಲ್ಪಡುವ ಸಾಧ್ಯತೆಯಿದೆ. ಗೂಗಲ್ನಲ್ಲಿ ಕ್ಲೌಡ್ ಮೂಲಸೌಕರ್ಯ, ಎಂಟರ್ಪ್ರೈಸ್ ಸಾಫ್ಟ್ವೇರ್ ಮತ್ತು ಎಐ ಸೇವೆಗಳನ್ನು ನಿರ್ವಹಿಸುತ್ತಿರುವ ಕುರಿಯನ್, ಎನ್ವಿಡಿಯಾ ವ್ಯವಹಾರಕ್ಕೆ ಅತ್ಯಗತ್ಯವಾದ ಪ್ರಮುಖ ಗ್ರಾಹಕರು ಮತ್ತು ತಂತ್ರಜ್ಞಾನದ ನೇರ ಅನುಭವ ಹೊಂದಿದ್ದಾರೆ. ಆದರೆ ಇವರ ವೃತ್ತಿಜೀವನದಲ್ಲೂ ಚಿಪ್ ವಿನ್ಯಾಸದ ನೇರ ಅನುಭವವಿಲ್ಲ.
