– 18ರ ಪೈಕಿ ಈಗ 6 ನಿಲ್ದಾಣಗಳಿಗೆ ಮೆಟ್ರೋ ಸಂಚಾರ
– 2027 ರಲ್ಲಿ ಸುರಂಗ ಮಾರ್ಗ ಮುಕ್ತಾಯ
ಬೆಂಗಳೂರು: ನಮ್ಮ ಮೆಟ್ರೋದ(Namma Metro) ಮಹತ್ವಾಕಾಂಕ್ಷಿ ‘ಗುಲಾಬಿ ಮಾರ್ಗ’ದ (Pink Line) ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ಚಾಲನೆ ನೀಡಲಿದ್ದಾರೆ. ನಾಳೆಯಿಂದಲೇ ಈ ಮಾರ್ಗ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಈ ಹೊಸ 7.5 ಕಿ.ಮೀ. ಮಾರ್ಗದ ಸೇರ್ಪಡೆಯೊಂದಿಗೆ ಬೆಂಗಳೂರಿನ (Bengaluru) ಒಟ್ಟು ಮೆಟ್ರೋ ಜಾಲವು ಪ್ರಸ್ತುತ ಇರುವ 96.10 ಕಿ.ಮೀ.ನಿಂದ 103.60 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಈ ಮೂಲಕ ನಮ್ಮ ಮೆಟ್ರೋ 100 ಕಿ.ಮೀ. ಗಡಿ ದಾಟಿದ ಐತಿಹಾಸಿಕ ಸಾಧನೆ ಮಾಡಿದೆ.
ಹೊಸ ಮಾರ್ಗದ 6 ನಿಲ್ದಾಣಗಳು
ತಾವರೆಕೆರೆಯಿಂದ ನಾಗವಾರದವರೆಗಿನ 13.8 ಕಿ.ಮೀ. ಉದ್ದದ ಸುರಂಗ ಮಾರ್ಗದ ಕಾಮಗಾರಿಯು 2027ಕ್ಕೆ ಮುಕ್ತಾಯಗೊಳ್ಳಲಿದೆ. ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಒಟ್ಟು 18 ನಿಲ್ದಾಣಗಳಿದ್ದು ಬನ್ನೇರುಘಟ್ಟ ರಸ್ತೆಯ ಎತ್ತರಿಸಿದ ಮಾರ್ಗದಲ್ಲಿರುವ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ ಬೆಂಗಳೂರು (IIMB), ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ, ತಾವರೆಕೆರೆ ನಿಲ್ದಾಣಗಳು ಈಗ ರೈಲು ಸಂಚಾರಕ್ಕೆ ಮುಕ್ತವಾಗಲಿದೆ.
ಸುರಂಗ ಕೆಲಸ ಪೂರ್ಣಗೊಂಡ ಬಳಿಕ ನಾಗವಾರ, ಕಾಡುಗುಂಡನಹಳ್ಳಿ, ವೆಂಕಟೇಶಪುರ, ಟ್ಯಾನರಿ ರಸ್ತೆ, ಪಾಟರಿ ಟೌನ್, ಬೆಂಗಳೂರು ದಂಡು (ಕಂಟೋನ್ಮೆಂಟ್) ರೈಲ್ವೆ ನಿಲ್ದಾಣ, ಶಿವಾಜಿ ನಗರ, ಮಹಾತ್ಮಾ ಗಾಂಧಿ ರಸ್ತೆ, ರಾಷ್ಟ್ರೀಯ ಸೈನಿಕ ಶಾಲೆ, ಲ್ಯಾಂಗ್ಫೋರ್ಡ್ ಟೌನ್, ಲಕ್ಕಸಂದ್ರ, ಡೈರಿ ವೃತ್ತದ ನಿಲ್ದಾಣಗಳಿಗೆ ರೈಲು ಸಂಚಾರ ಆರಂಭವಾಗಲಿದೆ.
3 ಇಂಟರ್ಚೇಂಜ್ ನಿಲ್ದಾಣ
3 ಇಂಟರ್ಚೇಂಜ್ ನಿಲ್ದಾಣವು ಗುಲಾಬಿ ಮಾರ್ಗದಲ್ಲಿ ಬರುತ್ತದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಆರ್.ವಿ. ರಸ್ತೆ – ಬೊಮ್ಮಸಂದ್ರದ ಹಳದಿ ಮಾರ್ಗದೊಂದಿಗೆ ಈ ಮಾರ್ಗ ಸಂಪರ್ಕಿಸುತ್ತದೆ. ಎಂಜಿ ರಸ್ತೆ ನಿಲ್ದಾಣದಲ್ಲಿ ಚಲ್ಲಘಟ್ಟ – ವೈಟ್ಫೀಲ್ಡ್ ನಡುವಿನ ನೇರಳೆ ಮಾರ್ಗವನ್ನು ಸಂಪರ್ಕಿಸುತ್ತದೆ. ನಾಗವಾರ ನಿಲ್ದಾಣದಲ್ಲಿ ವಿಮಾನ ನಿಲ್ದಾಣ – ಸಿಲ್ಕಬೋರ್ಡ್ ನಡುವೆ ಆರಂಭವಾಗಲಿರುವ ನೀಲಿ ಮಾರ್ಗವನ್ನು ಸಂಪರ್ಕಿಸುತ್ತದೆ.
ಜಯದೇವ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ (ಎಲೆಕ್ಟ್ರಾನಿಕ್ ಸಿಟಿ – ಆರ್.ವಿ. ರಸ್ತೆ ಮಾರ್ಗ) ಇಂಟರ್ಚೇಂಜ್ ಸೌಲಭ್ಯವಿದೆ. ಇದರಿಂದ ಈ ಭಾಗದ ನಾಗರಿಕರು ಸಿಲ್ಕ್ ಬೋರ್ಡ್, ಎಚ್ಎಸ್ಆರ್ ಲೇಔಟ್, ಜಯನಗರ, ಮೆಜೆಸ್ಟಿಕ್ ಹಾಗೂ ವೈಟ್ಫೀಲ್ಡ್ ಸೇರಿದಂತೆ ನಗರದ ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಬಹುದು.
ಪ್ರತಿ 8 ನಿಮಿಷಕ್ಕೆ ರೈಲು
ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಪ್ರತಿ 8 ನಿಮಿಷಕ್ಕೆ ರೈಲು ಸಂಚರಿಸಲಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ಗಮನಿಸಿ ಈ ಸಮಯವನ್ನು ಮತ್ತಷ್ಟು ಕಡಿಮೆ ಮಾಡುವ ಯೋಜನೆಯಿದೆ. ಇದನ್ನೂ ಓದಿ: ʻಪಿಂಕ್ ಲೈನ್ʼ ಮೆಟ್ರೋಗಿಂದು ʻನಮೋʼ ಚಾಲನೆ – ಮತ್ತೊಂದು ಇತಿಹಾಸ ಬರೆದ ಬೆಂಗಳೂರು!
