– 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ತಾರಾಲಯ
– 15 ಡಿಗ್ರಿ ಓರೆಯಾದ ಎಲ್ಇಡಿ ಡೋಮ್ನಲ್ಲಿ ಆಕಾಶ ವೀಕ್ಷಣೆಯ ಅದ್ಭುತ ಅನುಭವ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗರಿ ಸೇರ್ಪಡೆಯಾಗಲಿದೆ. ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಟಿಲ್ಟೆಡ್ ಎಲ್ಇಡಿ ಡೋಮ್ ಪ್ಲಾನೆಟೋರಿಯಂ ಇಂದು ಲೋಕಾರ್ಪಣೆಗೊಳ್ಳಲಿದೆ. ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಾಣಗೊಂಡಿರುವ ಈ ಅತ್ಯಾಧುನಿಕ ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಲಿದ್ದಾರೆ.
ಮೈಸೂರು ಕಾರ್ಯಕ್ರಮದಲ್ಲಿ 8 ಸಾವಿರ ಜನಕ್ಕೆ ವೇದಿಕೆ ಸಿದ್ಧ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 3.20ಕ್ಕೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಚಾಮುಂಡಿ ಬೆಟ್ಟದ (Chamundi Hills) ತಪ್ಪಲಿನ ತಾವರೆಕಟ್ಟೆ ಸಮೀಪದ ತಾರಾಲಯದ ಆವರಣಕ್ಕೆ ತೆರಳಲಿದ್ದಾರೆ. ಸಂಜೆ 3.50ಕ್ಕೆ ನೂತನ ತಾರಾಲಯವನ್ನ ಉದ್ಘಾಟಿಸಲಿರುವ ಪ್ರಧಾನಿ, ಬಳಿಕ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಭದ್ರತಾ ದೃಷ್ಟಿಯಿಂದ ಸಭೆಗೆ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ತಾರಾಲಯದ ಪಕ್ಕದಲ್ಲಿ ಸುಮಾರು 8 ಸಾವಿರ ಜನರು ಭಾಗವಹಿಸಬಹುದಾದ ಬೃಹತ್ ವೇದಿಕೆಯನ್ನ ನಿರ್ಮಿಸಲಾಗಿದೆ.
ಸಂಜೆ 5.45ಕ್ಕೆ ಕಾರ್ಯಕ್ರಮ ಮುಕ್ತಾಯಗೊಳಿಸಿ ರಸ್ತೆ ಮಾರ್ಗವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ತೆರಳಲಿರುವ ಪ್ರಧಾನಿ ಮೋದಿ, ಸಂಜೆ 6 ಗಂಟೆಗೆ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
120 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರೋ ಅತ್ಯಾಧುನಿಕ ತಾರಾಲಯ
ಮೈಸೂರು ವಿಶ್ವವಿದ್ಯಾನಿಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಈ ತಾರಾಲಯವನ್ನ ನಿರ್ಮಿಸಲಾಗಿದೆ. ಯೋಜನೆಗಾಗಿ ಮೈಸೂರು ವಿಶ್ವವಿದ್ಯಾನಿಲಯವು ಮೂರು ಎಕರೆ ಭೂಮಿಯನ್ನು ಒದಗಿಸಿದ್ದು, ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಾಕಾರಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (MPLADS) ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಂಡಿದೆ.
15 ಡಿಗ್ರಿ ಓರೆಯಾದ ಎಲ್ಇಡಿ ಡೋಮ್ ವಿಶೇಷತೆ
ಈ ತಾರಾಲಯದ ಪ್ರಮುಖ ಆಕರ್ಷಣೆಯೆಂದರೆ ಇದರ ವಿಶಿಷ್ಟ ವಿನ್ಯಾಸ. ವಿಶ್ವದಲ್ಲೇ ಮೊದಲ ಬಾರಿಗೆ 15 ಡಿಗ್ರಿ ಓರೆಯಾದ ಎಲ್ಇಡಿ ಡೋಮ್ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಸುಮಾರು 15 ಮೀಟರ್ ವ್ಯಾಪ್ತಿಯ ಗುಮ್ಮಟವನ್ನು ಸಂಪೂರ್ಣವಾಗಿ ಎಲ್ಇಡಿ ಪ್ಯಾನೆಲ್ಗಳಿಂದ ನಿರ್ಮಿಸಲಾಗಿದೆ. ಸಾಮಾನ್ಯ ತಾರಾಲಯಗಳಲ್ಲಿ ಬಳಸುವ ಪ್ರೊಜೆಕ್ಟರ್ ತಂತ್ರಜ್ಞಾನಕ್ಕೆ ಬದಲಾಗಿ, ಇಲ್ಲಿ ನೇರವಾಗಿ ಎಲ್ಇಡಿ ಡೋಮ್ನಲ್ಲೇ ಆಕಾಶಕಾಯಗಳ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತದೆ. 8K ರೆಸಲ್ಯೂಶನ್ ತಂತ್ರಜ್ಞಾನದ ಮೂಲಕ ಗ್ರಹಗಳು, ನಕ್ಷತ್ರಗಳು, ಗೆಲಾಕ್ಸಿಗಳು ಸೇರಿದಂತೆ ಬ್ರಹ್ಮಾಂಡದ ಅದ್ಭುತ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.
ಫ್ರಾನ್ಸ್ನ RSA Cosmos ಮತ್ತು ಜಪಾನ್ನ Konica Minolta ಸಂಸ್ಥೆಗಳ ಒಕ್ಕೂಟ ಅಭಿವೃದ್ಧಿಪಡಿಸಿರುವ SkyExplorer ಸಾಫ್ಟ್ವೇರ್ ಅನ್ನು ಈ ತಾರಾಲಯದಲ್ಲಿ ಬಳಸಲಾಗುತ್ತಿದೆ. ವಿಶೇಷ ವಿನ್ಯಾಸದಿಂದಾಗಿ ವೀಕ್ಷಕರಿಗೆ ನೈಜ ಆಕಾಶವನ್ನು ವೀಕ್ಷಿಸುತ್ತಿರುವ ಅನುಭವ ದೊರೆಯಲಿದೆ. ಏಕಕಾಲದಲ್ಲಿ 150 ಜನರು ಕುಳಿತು ತಾರಾಲಯದ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.
ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳಿಗೆ ವಿಶೇಷ ತರಬೇತಿ
ಈ ತಾರಾಲಯವು ಕೇವಲ ಮನರಂಜನೆ ಮತ್ತು ಆಕಾಶ ವೀಕ್ಷಣೆಗೆ ಸೀಮಿತವಾಗದೆ, ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನೆಗೂ ಮಹತ್ವದ ವೇದಿಕೆಯಾಗಲಿದೆ. ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಇಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ COSMOS ಕಾಸ್ಮಾಲಜಿ ತರಬೇತಿ ಕೇಂದ್ರವೂ ಕಾರ್ಯನಿರ್ವಹಿಸಲಿದೆ. ಭಾರತದ ಅತ್ಯಾಧುನಿಕ ಟೆಲಿಸ್ಕೋಪ್ಗಳಿಂದ ಸಂಗ್ರಹವಾಗುವ ದತ್ತಾಂಶವನ್ನು ವಿಶ್ಲೇಷಿಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ಒಟ್ಟಿನಲ್ಲಿ, ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಂತ್ರಜ್ಞಾನ ಹೊಂದಿರುವ ಈ ತಾರಾಲಯವು ಮೈಸೂರಿನ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. ಖಗೋಳ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ಬ್ರಹ್ಮಾಂಡವನ್ನು ಹತ್ತಿರದಿಂದ ಅರಿಯುವ ಅಪೂರ್ವ ಅವಕಾಶ ಇದರಿಂದ ದೊರೆಯಲಿದೆ.



