ವಾಷಿಂಗ್ಟನ್: ವಿಶ್ವದ ಅಗ್ರಗಣ್ಯ ಚಿಪ್ ತಯಾರಿಕಾ ಹಾಗೂ ಕೃತಕ ಬುದ್ಧಿಮತ್ತೆ (AI) ದೈತ್ಯ ಸಂಸ್ಥೆ ಎನ್ವಿಡಿಯಾದ (Nvidia) ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಜೆನ್ಸನ್ ಹುವಾಂಗ್(Jensen Huang) ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಜಾಗತಿಕ ಟೆಕ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಉದ್ಯಮಿ ಆಲಿಸ್ ಹುವಾಂಗ್ (ಹುವಾಂಗ್ ಲೆ) ಅವರೊಂದಿಗೆ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ರಾಷ್ಟ್ರೀಯ ಭದ್ರತೆ ಹಾಗೂ ಕಂಪನಿಯ ಗೌಪ್ಯತೆಯ ದೃಷ್ಟಿಯಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಎನ್ವಿಡಿಯಾ ಆಡಳಿತ ಮಂಡಳಿಯು, ಹುವಾಂಗ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಆಡಳಿತ ಮಂಡಳಿಯ ಕಠಿಣ ಕ್ರಮಕ್ಕೂ ಮುನ್ನವೇ ಹುವಾಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ವೇಳೆ 63 ವರ್ಷದ ಜೆನ್ಸನ್ ಹುವಾಂಗ್ ಅವರು ಕಂಪನಿಯಲ್ಲೇ ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಮಹಿಳಾ ಉದ್ಯೋಗಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಸ್ಫೋಟಕ ವರದಿಗಳು ಹರಿದಾಡುತ್ತಿವೆ.
ಎನ್ವಿಡಿಯಾದ ಆರೋಗ್ಯ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ (48) ಅವರೊಂದಿಗೆ ಹುವಾಂಗ್ ಆತ್ಮೀಯವಾಗಿ ವರ್ತಿಸುತ್ತಿರುವ ದೃಶ್ಯಗಳ ವಿಡಿಯೋ ಸಾಕ್ಷ್ಯವಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳು ಉಲ್ಲೇಖಿಸಿವೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ವೇಳೆ, ಹೋಟೆಲ್ನಲ್ಲಿ ಇಬ್ಬರೂ ಅತ್ಯಂತ ಆತ್ಮೀಯವಾಗಿರುವುದನ್ನು ಹಲವರು ಗಮನಿಸಿದ್ದರು ಎಂದು ಹೇಳಲಾಗುತ್ತಿದೆ.
ವೈಯಕ್ತಿಕ ನಡವಳಿಕೆಯ ಆರೋಪಗಳು ಮತ್ತು ಗೂಢಚರ್ಯೆ ಶಂಕೆಯ ವಿವಾದಗಳು ಒಟ್ಟಾಗಿ ಕಂಪನಿಯ ಪ್ರತಿಷ್ಠೆಗೆ ಧಕ್ಕೆ ತರುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಈ ದಿಢೀರ್ ಬೆಳವಣಿಗೆ ನಡೆದಿದೆ ಎನ್ನಲಾಗಿದ್ದು, ಕಂಪನಿಯ ಮುಂದಿನ ನಾಯಕತ್ವದ ಕುರಿತು ಟೆಕ್ ವಲಯದಲ್ಲಿ ಕುತೂಹಲ ಮೂಡಿದೆ.
ಪ್ರಸ್ತುತ ಕಂಪನಿಯ ಸಿಎಫ್ಒ (CFO) ಆಗಿರುವ ಕೊಲೆಟ್ ಕ್ರೆಸ್ (Colette Kress) ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಖಾಯಂ ಸಿಇಒ ನೇಮಕಕ್ಕಾಗಿ ಆಡಳಿತ ಮಂಡಳಿಯು ಕಂಪನಿಯ ಒಳಗಿನ ಮತ್ತು ಹೊರಗಿನ ಅಭ್ಯರ್ಥಿಗಳ ಹುಡುಕಾಟವನ್ನು ಆರಂಭಿಸಿದೆ.
ಜೆನ್ಸನ್ ಹುವಾಂಗ್ ಅವರು ಎನ್ವಿಡಿಯಾ ಕಂಪನಿಯಲ್ಲಿ 33 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಏಪ್ರಿಲ್ 5, 1993 ರಂದು ಎನ್ವಿಡಿಯಾ ಕಂಪನಿಯನ್ನು ಸ್ಥಾಪಿಸಿದ ಬಳಿಕ ಅವರು ಕಂಪನಿಯ ಅಧ್ಯಕ್ಷ, ಸಿಇಒ ಮತ್ತು ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆರೋಪ ಏನು?
ಸಿಂಗಾಪುರದ ಕ್ಲೌಡ್ ಕಂಪನಿಯಾದ ಮೆಗಾಸ್ಪೀಡ್ (Megaspeed) ನ ಮಾಜಿ ಕಾರ್ಯನಿರ್ವಾಹಕಿ ಆಲಿಸ್ ಹುವಾಂಗ್ ಅವರೊಂದಿಗೆ ತಮಗೆ ಸಂಬಂಧವಿತ್ತು ಎಂದು ಜೆನ್ಸನ್ ಹುವಾಂಗ್ ಒಪ್ಪಿಕೊಂಡಿದ್ದಾರೆ. ಈ ಕುರಿತು ಅವರು ನವೆಂಬರ್ 8,ರಂದು ಎನ್ವಿಡಿಯಾ ಉದ್ಯೋಗಿಗಳ ಕ್ಷಮೆಯಾಚಿಸಿದ್ದಾರೆ.
ಎನ್ವಿಡಿಯಾ ಕಂಪನಿಯನ್ನು ಗುರಿಯಾಗಿಸಿಕೊಂಡು ನಡೆಸಲಾದ ‘ಹನಿ ಟ್ರ್ಯಾಪ್’ ಕಾರ್ಯಾಚರಣೆಯಲ್ಲಿ ಚೀನಾದ ರಾಜ್ಯ ಭದ್ರತಾ ಸಚಿವಾಲಯ (MSS) ಆಲಿಸ್ ಹುವಾಂಗ್ ಅವರನ್ನು ನೇಮಿಸಿಕೊಂಡಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಸುಮಾರು 4.8 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಎನ್ವಿಡಿಯಾ ಚಿಪ್ಗಳನ್ನು ಖರೀದಿಸಿರುವ ಮೆಗಾಸ್ಪೀಡ್ ಕಂಪನಿಯು, ನಿರ್ಬಂಧಿತ ಎಐ (AI) ತಂತ್ರಜ್ಞಾನವನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡಲು ಬಳಕೆಯಾಗುತ್ತಿದೆಯೇ ಎಂಬ ಬಗ್ಗೆ ಅಮೆರಿಕದ ಫೆಡರಲ್ ಸಂಸ್ಥೆಗಳು ಈಗ ತನಿಖೆ ನಡೆಸುತ್ತಿವೆ.
