ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ದೇಶದ ಚಿಲ್ಲರೆ ಹಣದುಬ್ಬರ(Inflation) ದರವು ಅಕ್ಟೋಬರ್ ತಿಂಗಳಲ್ಲಿ ಶೇ. 6.09ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಈ ಮೂಲಕ 2024ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ನಿಗದಿಪಡಿಸಿದ್ದ ಶೇ. 6ರ ಗರಿಷ್ಠ ಮಿತಿಯನ್ನು ದಾಟಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ನಲ್ಲಿ ಶೇ. 5.54ರಷ್ಟಿದ್ದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ನಲ್ಲಿ ಗಣನೀಯ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಆಹಾರ ಹಣದುಬ್ಬರ ದರವು ಹಿಂದಿನ ತಿಂಗಳ ಶೇ. 7.74ರಿಂದ ಶೇ. 8.94ಕ್ಕೆ ಜಿಗಿದಿದೆ.
ಅತಿ ಹೆಚ್ಚು ಬೆಲೆ ಏರಿಕೆಯಾದ 5 ವಸ್ತುಗಳು
ಈರುಳ್ಳಿ ಶೇ. 116.22, ಬೆಳ್ಳುಳ್ಳಿ ಶೇ. 60.74, ಬೆಳ್ಳಿ ಆಭರಣಗಳು ಶೇ. 52.39, ಶುಂಠಿ ಶೇ. 48.32, ನಿಂಬೆಹಣ್ಣು ಶೇ. 47.30 ರಷ್ಟು ಬೆಲೆ ಏರಿಕೆಯಾಗಿದೆ. ಹಣದುಬ್ಬರವನ್ನು ಶೇ. 2ರಿಂದ ಶೇ. 6ರ ವ್ಯಾಪ್ತಿಯಲ್ಲಿ ನಿಯಂತ್ರಿಸುವ ಹೊಣೆಗಾರಿಕೆಯನ್ನು ಆರ್ಬಿಐ ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಗರಿಷ್ಠ ಮಿತಿಯನ್ನು ದಾಟಿದಂತಾಗಿದೆ. ಈ ಹಿಂದೆ 2024ರ ಅಕ್ಟೋಬರ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.25ರಷ್ಟಿತ್ತು. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಂಸತ್ ವಿಶೇಷ ಅಧಿವೇಶನಕ್ಕೆ ಕೇಂದ್ರ ಸಿದ್ಧತೆ
ಆರ್ಬಿಐ ಬಡ್ಡಿದರ ಏರಿಕೆ ಸಾಧ್ಯತೆ?
ಡಿಸೆಂಬರ್ 2 ರಿಂದ 4ರವರೆಗೆ ನಡೆಯಲಿರುವ ಆರ್ಬಿಐ ಹಣಕಾಸು ನೀತಿ ಸಮಿತಿ (MPC) ಸಭೆಗೆ ಮುನ್ನ ಪ್ರಕಟವಾಗಿರುವ ಈ ಅಂಕಿಅಂಶಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಏರುತ್ತಿರುವ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ನಡುವೆ, ಕಳೆದ ಅಕ್ಟೋಬರ್ನಲ್ಲಿ ಆರ್ಬಿಐ ಸುಮಾರು ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರವನ್ನು ಶೇ. 0.25ರಷ್ಟು ಹೆಚ್ಚಿಸಿ ಶೇ. 5.50ಕ್ಕೆ ನಿಗದಿಪಡಿಸಿತ್ತು. ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಏರಿಸುವ ಸುಳಿವನ್ನೂ ಕೇಂದ್ರೀಯ ಬ್ಯಾಂಕ್ ನೀಡಿತ್ತು.
