ನವದೆಹಲಿ: ರಾಜೀವ್ ಗಾಂಧಿ (Rajiv Gandhi) ಹತ್ಯೆ ನಡೆಯುವ ಕೆಲವೇ ದಿನಗಳ ಮುನ್ನ ತಾಯಿಯ ಜೊತೆ ರಾಹುಲ್ ಗಾಂಧಿಯವರು (Rahul Gandhi) ತಮ್ಮ ತಂದೆಯ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂಬ ವಿಚಾರವನ್ನು ಸೋನಿಯಾ ಗಾಂಧಿಯವರ (Sonia Gandhi) ಆತ್ಮಕಥೆ `ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ರಾಜೀವ್ ಗಾಂಧಿಯವರ ಭದ್ರತೆಯ ಬಗ್ಗೆ ಅಮೆರಿಕದಲ್ಲಿ ಓದುತ್ತಿದ್ದ ರಾಹುಲ್ ಗಾಂಧಿಯವರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಅವರ ಹತ್ಯೆಗೂ ಎರಡು ತಿಂಗಳ ಮುನ್ನ ಸೋನಿಯಾ ಗಾಂಧಿಯವರ ಜೊತೆ ಮಾತನಾಡುತ್ತಾ, ಅಪ್ಪನಿಗೆ ಭಾರತದಲ್ಲಿ ಭದ್ರತೆಯೇ ಇಲ್ಲ. ನಾವು ಅವರ ಸಾವಿಗೆ ಬರಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಅದಾದ ಎರಡೇ ತಿಂಗಳಲ್ಲಿ ರಾಜೀವ್ ಹತ್ಯೆಯಾಗಿತ್ತು. ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಎಸ್ಪಿಜಿ ಭದ್ರತೆ ಹಿಂಪಡೆದಿದ್ದರಿಂದಲೇ ದುರಂತ ಸಂಭವಿಸಿತ್ತು ಅಂತ ದು:ಖ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಣಬ್ ಮುಖರ್ಜಿ ಪ್ರಧಾನಿಯಾಗುವ ಆಸೆ ಹೊಂದಿದ್ದರು: ಆತ್ಮಕಥನದಲ್ಲಿ ಸೋನಿಯಾ ಉಲ್ಲೇಖ
ಇನ್ನೂ ಅಣ್ಣಾ ಹಜಾರೆ ಹೋರಾಟಕ್ಕೆ ಆರ್ಎಸ್ಎಸ್ ನಂಟಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಸೋನಿಯಾ ಗಾಂಧಿಯವರು, ಈ ಹೋರಾಟವೇ ಮೋದಿಗೆ ಅಡಿಪಾಯ ಹಾಕಿಕೊಟ್ಟಿದ್ದು ಅಂತ ಹೇಳಿಕೊಂಡಿದ್ದಾರೆ. ನನಗೆ ಪ್ರಧಾನಿ ಮೋದಿ ಜೊತೆ ವೈಯಕ್ತಿಕ ಸಂಪರ್ಕವಿಲ್ಲ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ಔಪಚಾರಿಕ ನಮಸ್ಕಾರಕ್ಕಷ್ಟೇ ಸೀಮಿತ. ರಾಹುಲ್ ಗಾಂಧಿಗೂ ಮುನ್ನ ಅವಧಿ ಪೂರ್ವ ಗಂಡು ಮಗು ಜನಿಸಿತ್ತು ಅನ್ನೋ ಅಚ್ಚರಿ ಮಾಹಿತಿಯನ್ನೂ ಅವರು ಹೊರ ಹಾಕಿದ್ದಾರೆ. ಆದರೆ ಹುಟ್ಟಿದ ಆ ಮಗು ಕೆಲವೇ ಗಂಟೆಗಳಲ್ಲಿ ಮೃತಪಟ್ಟಿತ್ತು.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಬಹುಮತ ಗಳಿಸಿದ ನಂತರ, ಪ್ರಧಾನಿ ಹುದ್ದೆ ನಿರಾಕರಿಸಿದ ಹಿಂದಿನ ತೀವ್ರ ವೈಯಕ್ತಿಕ ಮತ್ತು ರಾಜಕೀಯ ತೊಳಲಾಟಗಳನ್ನು ಅವರು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಂಗತಿಯಿಂದ ಹಿಡಿದು ಪತಿ ರಾಜೀವ್ ಗಾಂಧಿ ಜೊತೆಗಿನ ಒಡನಾಟ ಬಗ್ಗೆಯೂ ಸೋನಿಯಾ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ ಪುಸ್ತಕ ಮಾರುಕಟ್ಟೆಗೆ – ರಾಜಕೀಯ ಜೀವನದ ಹತ್ತಾರು ಕೌತುಕಗಳು ಬಹಿರಂಗ
