ಬೆಂಗಳೂರು: ನಗರದ (Bengaluru) ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ಚಂದ್ರ ದೇವಾಲಯದಲ್ಲಿ (ISKCON Temple) ಗೋವರ್ಧನ ಪೂಜೆ (Govardhana Puja) ಮತ್ತು ದೀಪೋತ್ಸವ ವೈಭವದಿಂದ ಆಚರಿಸಲಾಯಿತು.
ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಗೋಕುಲ ವಾಸಿಗಳನ್ನು ರಕ್ಷಿಸಿದ ಲೀಲೆಯ ಸ್ಮರಣೆಯಲ್ಲಿ ನಡೆದ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರು ಗೋವರ್ಧನಾಷ್ಟಕ ಗಾಯನದೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದರು. ಗೋಶಾಲೆಯಲ್ಲಿ ಗೋಪಾಲ ಚಿತ್ರಕ್ಕೆ ಆರತಿ ಹಾಗೂ ಗೋಪೂಜೆಯನ್ನು ನೆರವೇರಿಸಲಾಯಿತು. ಇದೇ ವೇಳೆ ಭಕ್ತರು ಗೋಸೇವೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಬಲಿಪಾಡ್ಯಮಿ – ಮಂತ್ರಾಲಯದಲ್ಲಿ ಮೂಲ ರಾಮದೇವರಿಗೆ ಶ್ರೀಗಳಿಂದ ಮಹಾಭಿಷೇಕ
ದೇವಾಲಯದಲ್ಲಿ ಕೃಷ್ಣ ಬಲರಾಮರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ, ಗೋವರ್ಧನಾಷ್ಟಕ ಗಾಯನದೊಂದಿಗೆ ಕೃಷ್ಣ ಬಲರಾಮ ಹಾಗೂ ಗೋವರ್ಧನ ಆರತಿ ನಡೆಯಿತು. ನಂತರ ದಾಮೋದರ ಆರತಿ ಸಲ್ಲಿಸಲಾಯಿತು. ಬಳಿಕ ಶಯನ ಪಲ್ಲಕ್ಕಿ ಸೇವೆ ನಡೆಯಿತು.
ಪೂಜೆಯ ಬಳಿಕ ಬೆಂಗಳೂರು ಇಸ್ಕಾನ್ನ ಅಧ್ಯಕ್ಷ ಮಧು ಪಂಡಿತ ದಾಸ ಅವರು ಎಲ್ಲಾ ಭಕ್ತರಿಗೂ ಶುಭ ಹಾರೈಸಿ, ಮಾತನಾಡಿದರು. ಎಲ್ಲರ ಜೀವನದಲ್ಲಿ ಬೆಳಕನ್ನು ತರುವಂತಹ ಉತ್ಸವ ದೀಪಾವಳಿ ಹಬ್ಬ, ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ದೀಪ ಜ್ಯೋತಿಯನ್ನು ಹರಡಿಸುವ ಹಬ್ಬ ಇದು. ಭಗವಂತ ತಮ್ಮ ಭಕ್ತರನ್ನು ಸದಾಕಾಲ ರಕ್ಷಿಸುತ್ತಾರೆ ಅನ್ನೋದಕ್ಕೆ ಸಾಕ್ಷಿ ಗೋವರ್ಧನ ಲೀಲೆ, ಹಾಗಾಗಿ ಎಲ್ಲರೂ ದಿನನಿತ್ಯ ಶ್ರೀಕೃಷ್ಣನ ನಾಮಸಂಕೀರ್ತನೆ, ಭಗವತ್ ಪಾರಾಯಣ ಮಾಡಿದರೆ ಕಷ್ಟಕರ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮ ಕಾಪಾಡುತ್ತಾರೆ. ಎಲ್ಲರ ಜೀವನದಲ್ಲಿ ಬೆಳಕನ್ನ ಬೆಳಗಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ನಂತರ ಎಲ್ಲಾ ಭಕ್ತರಿಗೆ ಅನ್ನಕೂಟ ಪ್ರಸಾದ ವಿತರಿಸಲಾಯಿತು. ಇದನ್ನೂ ಓದಿ: ಗೋವರ್ಧನ ಪೂಜೆಯ ಶುಭಕೋರಿದ ಪ್ರಧಾನಿ ಮೋದಿ


