ಬೆಂಗಳೂರು: ಪೆಟ್ರೋಲ್ಗೆ ಎಥೆನಾಲ್ ಮಿಶ್ರಣದ ಜಟಾಪಟಿ ಜೋರಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಸಚಿವ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ಆರೋಪ, ಟೀಕೆ, ಸಮರ್ಥನೆಗಳಿಗೆ ಸಚಿವ ರಿಜ್ವಾನ್ ಅರ್ಷದ್ ತಿರುಗೇಟು ಕೊಟ್ಟಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಕೌಂಟರ್ ಕೊಟ್ಟಿದ್ದಾರೆ.
ಎಥೆನಾಲ್ ಮಿಶ್ರಣ ಬಗ್ಗೆ ನಮ್ಮ ಫಲಿತಾಂಶಗಳನ್ನು ಕೇವಲ ಸೆನ್ಸೇಷನಲ್ ಸುದ್ದಿ ಎಂದು ತಳ್ಳಿಹಾಕಬೇಡಿ. ಅದರ ಬದಲು ಪಾರದರ್ಶಕ ಮತ್ತು ಸ್ವತಂತ್ರ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸಿ. ನಮ್ಮನ್ನು ಮೂರ್ಖರೆಂದು ಕರೆಯುವುದು ಮತ್ತು ನಮ್ಮ ಮೇಲೆ ವೈಯಕ್ತಿಕ ದಾಳಿಗಳನ್ನು ನಡೆಸುವುದು ನಿಮ್ಮನ್ನು ನಮ್ಮ ಪ್ರಶ್ನೆಗಳಿಂದ ಪಾರುಮಾಡಲಾರದು. ನಾವು ಮೂರ್ಖರಲ್ಲ, ಭಾರತದ ಜನರೂ ಮೂರ್ಖರಲ್ಲ ಎಂದು ಜೋಶಿ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ವೈಯಕ್ತಿಕ ದಾಳಿಗಳು ವೈಜ್ಞಾನಿಕ ಸಾಕ್ಷ್ಯಗಳಿಗೆ ಅಥವಾ ಜನರ ಆತಂಕಗಳಿಗೆ ಉತ್ತರವಾಗಲಾರವು. ಶುದ್ಧ ಪೆಟ್ರೋಲ್ನ ಬೆಲೆ ಲೀಟರ್ಗೆ 53 ರೂಪಾಯಿ ಇದೆ. ಎಥೆನಾಲ್ನ ಬೆಲೆ ಲೀಟರ್ಗೆ 55.72 ರೂಪಾಯಿ ಇದೆ. ಹೀಗೆಂದು ನೀವೇ ಹೇಳುತ್ತೀರಿ. ಪೆಟ್ರೋಲ್ಗಿಂತ ಎಥೆನಾಲ್ ಹೆಚ್ಚು ದುಬಾರಿಯಾಗಿದ್ದರೆ, ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸಲು ಏಕೆ ಒತ್ತಾಯಿಸುತ್ತಿದೆ? ಇದರ ಹಿಂದಿರುವ ಆರ್ಥಿಕ ಸಮರ್ಥನೆ ಏನು? ಈ ನೀತಿಯಿಂದ ಯಾರಿಗೆ ಲಾಭವಾಗುತ್ತಿದೆ ಮತ್ತು ಅಂತಿಮವಾಗಿ ಇದರ ಹೊರೆ ಯಾರ ಮೇಲೆ ಬೀಳುತ್ತಿದೆ? ಇದರ ಹೊರೆ ಸಾಮಾನ್ಯ ಜನರ ಮೇಲೆಯೇ ಅಲ್ಲವೇ? ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಯಾವ ಹಿತಾಸಕ್ತಿ ಗುಂಪುಗಳಿಗೆ ಲಾಭವಾಗುತ್ತಿದೆ? ಈ ನಿರ್ಧಾರದ ಮೇಲೆ ಪ್ರಭಾವ ಬೀರುತ್ತಿರೋ ಲಾಬಿ ಯಾವುದಾದರೂ ಇದೆಯೇ ಎಂದು ಪ್ರಶ್ನಿಸಿದರು.
ಎಥೆನಾಲ್ ಮಿಶ್ರಣದ ಪೆಟ್ರೋಲ್ಗೆ ವಾಹನಗಳ ಹೊಂದಾಣಿಕೆಯ ಸಮಸ್ಯೆಗಳಿವೆ. ಹೀಗಿರುವಾಗ ಇಷ್ಟು ಆತುರದ, ಯೋಜನೆಯಿಲ್ಲದ ಮತ್ತು ಸಿದ್ಧತೆಯಿಲ್ಲದ ಈ ನೀತಿ ಬದಲಾವಣೆಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಲೇಬೇಕು. ಇಂಧನದ ಸ್ವತಂತ್ರ ಪರೀಕ್ಷೆ, ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ನ ನಿಖರ ಪ್ರಮಾಣವನ್ನು ಕಡ್ಡಾಯವಾಗಿ ಪ್ರಕಟಿಸುವುದು ಮತ್ತು ಜನರ ನಷ್ಟಕ್ಕೆ ಪರಿಹಾರ ನೀಡುವ ಅಗತ್ಯ ಇದೆ ಎಂದು ಹೇಳಿದರು.
ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ಜನರು ಅನುಭವಿಸುತ್ತಿರುವ ನಷ್ಟವು ವರ್ಷಕ್ಕೆ ಸುಮಾರು 1.01 ಲಕ್ಷ ಕೋಟಿ ರೂಪಾಯಿಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಜನರಿಗೆ E10, E20 ಮತ್ತು ಶುದ್ಧ ಪೆಟ್ರೋಲ್.. ಇವುಗಳಲ್ಲಿ ಯಾವುದನ್ನು ಬಳಸಬೇಕೆಂಬ ಆಯ್ಕೆಯನ್ನು ನೀಡಿ ಮೊದಲು. ಕರ್ನಾಟಕದ ಜನರು ಎತ್ತುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ ಎಂದು ವಾಗ್ದಾಳಿ ನಡೆಸಿದರು.
