ಕಾರವಾರ: 1.15 ಕೋಟಿ ರೂ. ಹವಾಲಾ ಹಣ ದರೋಡೆ (Robbery Case) ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ (Karwar) ಪೊಲೀಸ್ ಪೇದೆಯೊಬ್ಬರನ್ನು (Constable) ಮಂಗಳೂರು (Mangaluru) ಪೊಲೀಸರು ಬಂಧಿಸಿದ್ದಾರೆ.
ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್ ಬಂಧಿತ ಪೊಲೀಸ್ ಪೇದೆ. ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ ಹವಾಲಾ ಹಣವನ್ನು ದರೋಡೆ ಮಾಡುವ ಉದ್ದೇಶದಿಂದ ಸತ್ಯನಾರಾಯಣ ಎಂಬವರನ್ನು ಅಪಹರಿಸಿ, 1.15 ಕೋಟಿ ರೂ. ಹಣವನ್ನು ದೋಚಲಾಗಿತ್ತು. ಈ ಸಂಬಂಧ ಸತ್ಯನಾರಾಯಣ ಅವರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಅಪಹರಣದ ಹಿಂದೆ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ ಅವರ ಸಂಚು ಇರುವುದು ಬಯಲಾಗಿದೆ ಎನ್ನಲಾಗಿದೆ. ಕಾರವಾರದ ಯುವಕರನ್ನು ಬಳಸಿಕೊಂಡು ಅಪಹರಣಕ್ಕೆ ಯೋಜನೆ ರೂಪಿಸಿದ್ದ ಆರೋಪ ಶ್ರೀಶೈಲ್ ಮೇಲಿದೆ. ಇದನ್ನೂ ಓದಿ: ಜೈಲಲ್ಲೇ ಪೋಕ್ಸೊ ಆರೋಪಿಗಳಿಂದ ಹುಚ್ಚಾಟ – ಜೈಲರ್ಗೆ ಜೀವ ಬೆದರಿಕೆ
ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಬಳಸಿಕೊಂಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಗಣೇಶ ಕೋಳಂಕರ್ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಅಮಾನತುಗೊಳಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯೇ ಸಂಚು ರೂಪಿಸಿರುವುದು ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: 7 ಜನರ ಭೀಕರ ಹತ್ಯೆಗೆ ಮಗಳ ಸಾಥ್ – ಅಪ್ರಾಪ್ತೆಯಾಗಿದ್ದವಳಿಗೆ ಈಗ 18 ವರ್ಷ
