– ಇರಾನ್ ವಿರುದ್ಧ ಮತ್ತೆ ಯುದ್ಧದ ಎಚ್ಚರಿಕೆ ಕೊಟ್ಟ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಪರಮಾಣು ಶಸ್ತ್ರಾಸ್ತ್ರಗಳನ್ನು (Nuclear Weapons) ತಯಾರಿಸುವ ಸಾಮರ್ಥ್ಯವನ್ನು ಇರಾನ್ ಶೇ.85 ರಷ್ಟು ಕಡಿಮೆ ಮಾಡಿದೆ. ಆದಾಗ್ಯೂ ಅಗತ್ಯಬಿದ್ದರೆ ನಮ್ಮ ಪಡೆಗಳು ಮಿಲಿಟರಿ ಕ್ರಮ ತೆಗೆದುಕೊಳ್ಳಲು ಸಿದ್ಧವಾಗಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ.
.@POTUS: “Much was discussed with respect to the Islamic Republic of Iran… At this point, taking the military action doesn’t seem to be a very necessary thing — but we’re locked and loaded ready to go for any reason.” https://t.co/gOC2PDMVYZ
— Rapid Response 47 (@RapidResponse47) November 9, 2026
ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮೇಲೆ ನಿರಂತರ ಒತ್ತಡ ಹಾಗೂ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಹೊತ್ತಿನಲ್ಲೇ ಟ್ರಂಪ್ ಅವರ ಹೇಳಿಕೆ ಹೊರಬಿದ್ದಿದೆ. ಇರಾನ್ ನ್ಯೂಕ್ಲಿಯರ್ ಕಾರ್ಯಕ್ರಮದ ಕುರಿತು ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನಾ ಸಾಮರ್ಥ್ಯವನ್ನು ಶೇ.85 ರಷ್ಟು ಕಡಿಮೆ ಮಾಡಿದೆ. ಅಷ್ಟೇ ಅಲ್ಲ ಅವರು ನಮ್ಮೊಂದಿಗೆ ಸೌಜನ್ಯದಿಂದಲೇ ಮಾತುಕತೆ ನಡೆಸುತ್ತಿದ್ದಾರೆ. ಮುಂದೆ ಏನಾಗುತ್ತದೆ ನೋಡೋಣ… ಅಂತಾ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಯುದ್ಧ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ ಟ್ರಂಪ್, ಮಿಲಿಟರಿ ಕ್ರಮವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ ಅಂದುಕೊಳ್ಳಬೇಡಿ ಎಂದು ಸೈಲೆಂಟಾಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.
ನಾವು ಮತ್ತೆ ಯುದ್ಧಕ್ಕೆ ಮಧ್ಯಪ್ರವೇಶ ಮಾಡಬೇಕಾಗಿ ಬಂದ್ರೆ ಮಿಲಿಟರಿ ಕ್ರಮ ಕೈಗೊಳ್ಳಲು ಯೋಚಿಸಲ್ಲ. ನಮ್ಮ ಪಡೆಗಳು ಈಗಾಗಲೇ ಸಂಪೂರ್ಣ ಸನ್ನದ್ಧ ಸಿತಿಯಲ್ಲಿವೆ. ಯಾವುದೇ ಕ್ಷಣದಲ್ಲೂ ಮಿಲಿಟರಿ ಕ್ರಮ ಕೈಗೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ʻಟ್ರುತ್ ಸೋಷಿಯಲ್ʼನಲ್ಲಿ ಪ್ರತ್ಯೇಕ ಪೋಸ್ಟ್ ಹಂಚಿಕೊಂಡಿರುವ ಅವರು, ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಅವರು ಇರಾನ್ನಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್ ಮತ್ತು ಕುವೈತ್ ದೇಶಗಳು, ಅಮೆರಿಕದ ನೌಕಾ ದಿಗ್ಬಂಧನ (naval blockade) ಮತ್ತು ಹೊಸದಾಗಿ ಘೋಷಿಸಲಾದ ‘ಆಪರೇಷನ್ ಐರನ್ ಗೇಟ್’ (Operation Iron Gate) ಮುಂದುವರಿಯುವುದನ್ನು ಈ ರಾಷ್ಟ್ರಗಳು ಬಯಸುತ್ತವೆ. ಅಂದ್ರೆ ಭೂಮಾರ್ಗ ಮತ್ತು ಸಮುದ್ರ ಮಾರ್ಗ ಎರಡರಲ್ಲೂ ದಿಗ್ಬಂಧನ ಮುಂದುವರಿಯಲಿ ಎಂದು ಅವು ಬಯಸುತ್ತವೆ ಎಂದು ಹೇಳಿಕೊಂಡಿದ್ದಾರೆ.


