– ಪೆಟ್ರೋಲ್ ಗಿಂತ ಎಥೆನಾಲ್ ಬೆಲೆಯೇ ಹೆಚ್ಚು; ಸಚಿವರ ಸ್ಪಷ್ಟನೆ
– ಎಥೆನಾಲ್ ಮಿಶ್ರಣ ಪರೀಕ್ಷೆ ನಡೆಸಿದ ಲ್ಯಾಬ್ಗೆ ಮಾನ್ಯತೆಯೇ ಇಲ್ಲ ಎಂದ ಸಚಿವರು
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳುವುದರಲ್ಲಿ ನಿಪುಣರು. ಅವರು ಅತ್ಯಂತ ಮೂರ್ಖರಿದ್ದಾರೆ. ಪೆಟ್ರೋಲ್ನಲ್ಲಿ ಶೇ.39ರಷ್ಟು ಎಥೆನಾಲ್ ಇದೆ ಎಂದಿದ್ದಾರೆ. ಆದರೆ, ವಾಸ್ತವದಲ್ಲಿ ಇಷ್ಟು ಪ್ರಮಾಣದ ಎಥೆನಾಲ್ ದೇಶದಲ್ಲಿ ಉತ್ಪಾದನೆಯೇ ಇಲ್ಲ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೇಸ್ಗೆ ತಿರುಗೇಟು (Prahlad Joshi) ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಥೆನಾಲ್ ವಿಚಾರದಲ್ಲಿ ಕಾಂಗ್ರೇಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದ “ಆತ್ಮನಿರ್ಭರ ಭಾರತ” ಕ್ರಮವನ್ನು ಸಹಿಸದೇ ಹೀಗೆಲ್ಲ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಪೆಟ್ರೋಲ್ನಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಇದೆ ಎಂದ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ವೃಥಾ ಆರೋಪ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಬೇಜವಾಬ್ದಾರಿ, ಮತ್ತು ಅಪ್ರಬುದ್ಧರಂತೆ ಹೇಳಿಕೆ ನೀಡುತ್ತಿದ್ದಾರೆ. ಅಂದಾಜಿನ ಮೇಲೆ ಒಂದು ಗುಂಡು ಹೊಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರ 420 ಎಂದಿರಬೇಕು ರಾಹುಲ್ ಗಾಂಧಿ
ರಾಹುಲ್ ಗಾಂಧಿ ಬಹುಶಃ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 420 ಎಂದಿರಬೇಕು. ಸ್ಟಿಂಗ್ ಆಪರೇಷನ್ ಷಡ್ಯಂತ್ರ, ಬೆಲೆ ಏರಿಕೆ, ಇವಿಎಂ, SIR ವಿವಾದ ಇದೆಲ್ಲಾ ವಿಫಲವಾಯಿತು. ಹಾಗಾಗಿ ದೇಶವನ್ನು ಅಭದ್ರಪಡಿಸಲು ಇದನ್ನೆಲ್ಲ ಮಾಡುತ್ತಿದ್ದಾರೆ. ಇವರ ಆಡಳಿತ ಕಂಡು ರಾಹುಲ್ ಗಾಂಧಿ ರಾಜ್ಯ ಸರ್ಕಾರಕ್ಕೇ 420 ಎಂದಿರಬೇಕು. 420 ಆಗಿರುವವರಿಗೆ 420 ವಿಚಾರ ಬರುತ್ತದೆ ಎಂದು ತಿರುಗೇಟು ನೀಡಿದರು.
ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ ಮಾಡುವುದರಿಂದ OMC ಗೆ ನಷ್ಟವಿದೆ. ಪೆಟ್ರೋಲ್ ದರ 53 ರೂ. ಇದ್ದು, ಎಥೆನಾಲ್ 56.70 ಪೈಸೆ ಬೆಲೆಯಿದೆ. ಎಥೆನಾಲ್ ದರವೇ ಹೆಚ್ಚಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಇಂಧನದಲ್ಲೂ ‘ಆತ್ಮನಿರ್ಭರ ಭಾರತ’ ಸಾಧನೆ ಮತ್ತು ರೈತರ ಹಿತ ಕಾಪಾಡಲು ಎಥೆನಾಲ್ ಉತ್ಪಾದನೆ ಮತ್ತು ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಉತ್ತೇಜನ ನೀಡಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ 63 ಇಂಧನ ಮಾದರಿ ಸಂಗ್ರಹಿಸಿ 14 ಮಾದರಿ ಮಾತ್ರ ಪ್ರಕಟಪಡಿಸಿದೆ. ಅದರಲ್ಲೂ 6 ಪ್ರಯೋಗಾಲಯಗಳ ವರದಿ ಬಿಡುಗಡೆ ಮಾಡಿದ್ದಾರೆ. 11ರಲ್ಲಿ ಎಥೆನಾಲ್ ಪ್ರಮಾಣ ಕನಿಷ್ಠ 21 ರಿಂದ ಗರಿಷ್ಠ 39ರಷ್ಟಿದೆ ಎಂದಿದೆ. ಆದರೆ, ದೇಶದಲ್ಲಿ ಅಷ್ಟು ಪ್ರಮಾಣದ ಎಥೆನಾಲ್ ಉತ್ಪಾದನೆಯೇ ಇಲ್ಲ. ಸಾಮಾನ್ಯ ಜ್ಞಾನವೇ ಇಲ್ಲದವರಂತೆ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕದ 56 ಮಾದರಿ ಸೇರಿದಂತೆ ದೇಶಾದ್ಯಂತ ಒಟ್ಟು 896 ಮಾದರಿ ಪರೀಕ್ಷೆ ನಡೆಸಿ ರಿಪೋರ್ಟ್ ಸಹ ಕೊಟ್ಟಿದ್ದಾರೆ. ಇನ್ನು, 2000 ನಂತರದ ಇಂಧನ ನಿಯಂತ್ರಣ ಆದೇಶವೇ ಇವರ ಕಾಲದಲ್ಲಿ ಆಗಿದೆ ಎಂದ ಸಚಿವರು, ಕಾಂಗ್ರೆಸ್ ನವರು ಶತಮೂರ್ಖರಿದ್ದಾರೆ ಎಂದು ಟೀಕಿಸಿದರು.
ಕಾನೂನು ಬದ್ಧವಾಗಿ ಪರೀಕ್ಷೆ ಮಾಡಿಲ್ಲ
ರಾಜ್ಯ ಕಾಂಗ್ರೇಸ್ ಸರ್ಕಾರ ಪೆಟ್ರೋಲ್ ಅನ್ನು ಕಾನೂನು ಬದ್ಧವಾಗಿ ಪರೀಕ್ಷೆ ಮಾಡಿಲ್ಲ ಮತ್ತು ಅದರ ವರದಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಪೆಟ್ರೋಲ್ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ಯಾವುದೇ ಪ್ರತಿನಿಧಿಗಳಿಗೆ ಆಹ್ವಾನ ಕೊಟ್ಟಿಲ್ಲ. ಕಾನೂನು ಪ್ರಕಾರ ಕನಿಷ್ಠ ಪಕ್ಷ ಅಲ್ಲಿನ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಂಬಂಧಪಟ್ಟ ಅಧಿಕಾರಿ ಉಪಸ್ಥಿತಿ ಇರಬೇಕು. ಆದರೆ, ಇದನ್ನೆಲ್ಲ ಉಲ್ಲಂಘಿಸಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ, ಶ್ರೀರಾಮ ರಿಸರ್ಚ್ ಇನ್ಸ್ಟಿಟ್ಯೂಟ್ ತಪಾಸಣೆ ನಡೆಸಿದೆ ಎಂದಿದೆ. ಆದರೆ, ವಾಸ್ತವವಾಗಿ ಈ ಸಂಸ್ಥೆ ಮಾನ್ಯತೆಯೇ ಪಡೆದಿಲ್ಲ. ಶೆಡ್ಯೂಲ್ 3ರ ಪ್ರಕಾರ ಪೆಟ್ರೋಲ್ ಮಾದರಿ ಟೆಸ್ಟ್ ಪ್ರಯೋಗಾಲಯಗಳ ಅರ್ಹತಾ ಪಟ್ಟಿಯಲ್ಲಿಯೇ ಇದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಜೋಶಿ, ರಾಜ್ಯ ಕಾಂಗ್ರೆಸ್ ಸರ್ಕಾರ ಬೇಕಂತಲೇ ಇದನ್ನೆಲ್ಲಾ ಮಾಡುತ್ತಿದೆ ಎಂದು ಆರೋಪಿಸಿದರು.
ಪೆಟ್ರೋಲ್ ಬೆಲೆ 53 ರೂ. ಇದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ಬರೋಬ್ಬರಿ 30 ರೂ. ತೆರಿಗೆ ವಿಧಿಸಿದೆ. ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ಕ್ಕೆ ಹಿನ್ನಡೆ ತರಲು ಮತ್ತು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಜೋಶಿ ಆರೋಪಿಸಿದರು.ಇದನ್ನೂ ಓದಿ: ಒಂದೇ ಕುಟುಂಬದ 7 ಮಂದಿ ಬಲಿ ಪಡೆದ ಹಂತಕನಿಗಿಲ್ಲ ಪಶ್ಚಾತ್ತಾಪ – ಅಪ್ಪ ಮಾಡಿದ್ದೇ ಸರಿ ಅಂತಿರೋ ಮಗಳು
ಎಥೆನಾಲ್ ಬಾಬ್ತು ಸುಮಾರು 1.66 ಕೋಟಿ ರೈತರಿಗೆ ಹಣ ಸಂದಾಯ ಮಾಡಿದೆ. ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣದಿಂದ ನಿಂದ 1.94 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಎಥೆನಾಲ್ ಉತ್ಪಾದನೆ, ಪೆಟ್ರೋಲ್ ಗೆ ಮಿಶ್ರಣ ವಿರೋಧಿಸುವ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಆಗಿದೆಯೇ? ಉತ್ತರಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರೈತ ವಿರೋಧಿ ಮಾನಸಿಕತೆಯ ಕಾಂಗ್ರೆಸ್ ಪಕ್ಷ ಎಥೆನಾಲ್ ಅನ್ನು ವಿರೋಧಿಸುತ್ತಿದೆ. ವಾಸ್ತವದಲ್ಲಿ ಪೆಟ್ರೋಲ್ ಗಿಂತ ಎಥೆನಾಲ್ ಬೆಲೆಯೇ ಹೆಚ್ಚು ಹೀಗಿರುವಾಗ ಪೆಟ್ರೋಲ್ ಕಂಪನಿಗಳೇಕೆ ಹೆಚ್ಚು ಪ್ರಮಾಣದ ಎಥೆನಾಲ್ ಸೇರಿಸುತ್ತವೆ? ಕಾಂಗ್ರೆಸ್ SIR, ಕಾಕ್ರೋಚ್ ಪಾರ್ಟಿ ಹೋರಾಟ ಎಲ್ಲದರಲ್ಲೂ ವಿಫಲವಾಯಿತು. ಈಗ ಹೊಸದಾಗಿ ಎಥೆನಾಲ್ ಹಿಡಿದು ಹೊರಟಿದ್ದಾರೆ ಅಷ್ಟೇ ಎಂದು ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.ಇದನ್ನೂ ಓದಿ: ಬೆಂಗಳೂರಲ್ಲಿ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ರೇಡ್ – ನಾಲ್ವರ ವಿರುದ್ಧ FIR; ಮೂವರು ಅರೆಸ್ಟ್
