ಪುಸ್ತಕದ ಪುಟಗಳಲ್ಲಿ ವಿಜ್ಞಾನವನ್ನ ಓದುವುದಕ್ಕೂ, ಅದೇ ವಿಜ್ಞಾನವನ್ನ ಸ್ವತಃ ಪ್ರಯೋಗಗಳ ಮೂಲಕ ಕಂಡುಹಿಡಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಂದು ಮಗು ಕಾಮನಬಿಲ್ಲು ಹೇಗೆ ಮೂಡುತ್ತದೆ ಎಂಬುದನ್ನು ಪಾಠದಲ್ಲಿ ಓದುವುದಕ್ಕಿಂತ, ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನದ ಮೂಲಕ ಅದನ್ನ ಪ್ರಾಯೋಗಿಕವಾಗಿ ಅರ್ಥಮಾಡಿಕೊಂಡಾಗ ಅದರಲ್ಲಿನ ಕುತೂಹಲ ಇನ್ನಷ್ಟು ಹೆಚ್ಚುತ್ತದೆ. ಇಂತಹ ಕಲಿಕೆಯ ಅನುಭವವನ್ನ ಮಕ್ಕಳಿಗೆ ಒದಗಿಸುತ್ತಿರುವ ಸಂಸ್ಥೆಯೇ ಚಾಮರಾಜನಗರದ ದೀನಬಂಧು (ಟ್ರಸ್ಟ್) ಶಿಕ್ಷಣ ಸಂಸ್ಥೆ.
ಬಡತನ, ಅನಾಥ ಮತ್ತು ಸಾಮಾಜಿಕ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ದೀನಬಂಧು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. 1992ರಲ್ಲಿ ಪ್ರೊ. ಜಿ.ಎಸ್. ಜಯದೇವ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಹಿರಿಯ ಪುತ್ರರಾದ ಜಯದೇವ್ ಅವರ ಕನಸಿನ ಕೂಸಾದ ದೀನಬಂಧು, ಆರಂಭದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕೇವಲ ಆರು ಹುಡುಗರೊಂದಿಗೆ ತನ್ನ ಸೇವೆಯನ್ನು ಆರಂಭಿಸಿತ್ತು. ಇಂದು ಹತ್ತಾರು ಮಕ್ಕಳಿಗೆ ಆಶ್ರಯ ನೀಡುವ ಮಕ್ಕಳ ಮನೆಯಾಗಿ ಬೆಳೆದಿದೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಹೆಜ್ಜೆಯಿಟ್ಟಿರುವ ಸಂಸ್ಥೆ, ಎಲ್ಕೆಜಿಯಿಂದ 10ನೇ ತರಗತಿವರೆಗೆ ಶಾಲೆಯನ್ನ ನಡೆಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅತ್ಯಲ್ಪ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. 400ಕ್ಕೂ ಹೆಚ್ಚು ಮಕ್ಕಳು ಈ ಶಿಕ್ಷಣ ವ್ಯವಸ್ಥೆಯ ಪ್ರಯೋಜನ ಪಡೆಯುತ್ತಿದ್ದಾರೆ. ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುವುದರ ಜೊತೆಗೆ ಗ್ರಾಮೀಣ ಮಕ್ಕಳಿಗೂ ಕಲಿಕೆಯ ಅವಕಾಶಗಳನ್ನು ವಿಸ್ತರಿಸುತ್ತಿದೆ.
ಪುಸ್ತಕಕ್ಕಿಂತ ಪ್ರಯೋಗಕ್ಕೆ ಹೆಚ್ಚು ಒತ್ತು!
ದೀನಬಂಧು ಸಂಸ್ಥೆಯ ವಿಶೇಷ ಪ್ರಯತ್ನಗಳಲ್ಲಿ ವಿಜ್ಞಾನ ಮತ್ತು ಗಣಿತವನ್ನು ಚಟುವಟಿಕೆಗಳ ಮೂಲಕ ಕಲಿಸುವ ವಿಧಾನ ಪ್ರಮುಖವಾಗಿದೆ. ಮಕ್ಕಳಿಗೆ ವಿಜ್ಞಾನವೆಂದರೆ ಕೇವಲ ಕಠಿಣ ಸೂತ್ರಗಳು, ಲೆಕ್ಕಾಚಾರಗಳು ಮತ್ತು ಪಾಠಗಳಲ್ಲ, ಅದು ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿರುವ ವಿಸ್ಮಯಗಳ ಅನ್ವೇಷಣೆ ಎಂಬುದನ್ನ ಮನದಟ್ಟು ಮಾಡಲಾಗುತ್ತಿದೆ. ಈ ಉದ್ದೇಶದಿಂದ ಶಿಕ್ಷಕರ ಸಂಪನ್ಮೂಲ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, 2007 ರಿಂದ ಸರ್ಕಾರಿ ಶಾಲೆಗಳೊಂದಿಗೂ ಸಹಯೋಗ ಆರಂಭಿಸಲಾಗಿದೆ. ಆರಂಭದಲ್ಲಿ 30 ಶಾಲೆಗಳೊಂದಿಗೆ ಕೆಲಸ ಮಾಡಿದ್ದ ಕೇಂದ್ರ, ಇದೀಗ ಕರ್ನಾಟಕದ 240 ಸರ್ಕಾರಿ ಶಾಲೆಗಳ 200ಕ್ಕೂ ಹೆಚ್ಚು ಶಿಕ್ಷಕರೊಂದಿಗೆ ಕೈಜೋಡಿಸಿದೆ. ಇದರ ಮೂಲಕ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಅನುಭವಾಧಾರಿತ ಕಲಿಕೆಯ ಅವಕಾಶ ದೊರೆಯುತ್ತಿದೆ.
ವಿಜ್ಞಾನದ ವಿಸ್ಮಯಗಳಿಗೆ ಮಕ್ಕಳೇ ಪ್ರಯೋಗಶೀಲರು!
ಇಲ್ಲಿನ ಕಲಿಕೆಯ ಮತ್ತೊಂದು ವಿಶೇಷವೆಂದರೆ ಎಲ್ಕೆಜಿಯಿಂದ 10ನೇ ತರಗತಿಯವರೆಗಿನ ಮಕ್ಕಳು ಸ್ವತಃ ಪ್ರಯೋಗಗಳನ್ನು ಮಾಡುವುದು. ಮೊಬೈಲ್ ಮೂಲಕ ಸೂಕ್ಷ್ಮಾಣು ಜೀವಿಗಳನ್ನು ವೀಕ್ಷಿಸುವುದು, ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವುದು, ಸರಳ ವಿದ್ಯುತ್ ಮಂಡಲ ನಿರ್ಮಿಸುವುದು, ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ವಿಧಾನವನ್ನು ತಿಳಿದುಕೊಳ್ಳುವುದು ಹೀಗೆ ಹಲವು ಪ್ರಯೋಗಗಳು ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತವೆ.
ಕಾಮನಬಿಲ್ಲು ಹೇಗೆ ಉಂಟಾಗುತ್ತದೆ? ಬೆಳಕಿನ ಪ್ರತಿಫಲನದ ವಿಸ್ಮಯವೇನು? ರೈಲಿನ ಚಕ್ರಗಳು ಸಿಲಿಂಡರ್ ಆಕಾರದಲ್ಲಿದ್ದರೆ ತಿರುವುಗಳಲ್ಲಿ ಏನಾಗಬಹುದು? ವಿದ್ಯುತ್ ಇಲ್ಲದ ಕಾಲದಲ್ಲಿ ಆರ್ಕಿಮಿಡಿಸ್ ಸ್ಕ್ರೂ ಬಳಸಿ ನೀರನ್ನು ಹೇಗೆ ಮೇಲಕ್ಕೆತ್ತಲಾಗುತ್ತಿತ್ತು? ಭೂಮಿಯಿಂದ ಬೇರೆ ಬೇರೆ ಗ್ರಹಗಳಿಗೆ ಹೋದಾಗ ಗುರುತ್ವಾಕರ್ಷಣೆ ಹೇಗೆ ಬದಲಾಗುತ್ತದೆ? ಇಂತಹ ಪ್ರಶ್ನೆಗಳಿಗೆ ಮಕ್ಕಳೇ ಪ್ರಯೋಗಗಳ ಮೂಲಕ ಉತ್ತರ ಕಂಡುಕೊಳ್ಳುತ್ತಿದ್ದಾರೆ.
ಇಲ್ಲಿ ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವ ಮಾರ್ಗದರ್ಶಕರು. ಆಟ, ಚಟುವಟಿಕೆ ಮತ್ತು ಪ್ರಯೋಗಗಳ ಮೂಲಕ ವಿಜ್ಞಾನ ಕಲಿಯುವ ಮಕ್ಕಳು ಪಠ್ಯಪುಸ್ತಕದ ವಿಷಯಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಹೊಸತನ್ನ ಕಂಡುಹಿಡಿಯುವ ಆಸಕ್ತಿಯನ್ನೂ ಬೆಳೆಸಿಕೊಳ್ಳುತ್ತಿದ್ದಾರೆ.
ದೀನಬಂಧು ಸಂಸ್ಥೆಯ ಸೇವೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, ಮಹಿಳೆಯರಿಗೆ ಕೌಶಲ ತರಬೇತಿ ಹಾಗೂ ಜೀವವೈವಿಧ್ಯ ಸಂರಕ್ಷಣೆಯಂತಹ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ.
ಒಟ್ಟಿನಲ್ಲಿ, ಬಡತನ ಮಕ್ಕಳ ಕನಸುಗಳಿಗೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ದೀನಬಂಧು ಸಂಸ್ಥೆ ಶಿಕ್ಷಣದ ಮೂಲಕ ಹೊಸ ಭರವಸೆ ಮೂಡಿಸುತ್ತಿದೆ. ವಿಜ್ಞಾನವನ್ನು ಕಂಠಪಾಠ ಮಾಡುವ ಬದಲು ಅನುಭವಿಸಿ ಕಲಿಯುವ ಅವಕಾಶ ನೀಡುವ ಮೂಲಕ, ಮಕ್ಕಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತಿದೆ. ಇಲ್ಲಿ ಮಕ್ಕಳಿಗೆ ವಿಜ್ಞಾನ ಕೇವಲ ಒಂದು ವಿಷಯವಲ್ಲ, ಪ್ರತಿದಿನವೂ ಹೊಸ ವಿಸ್ಮಯಗಳನ್ನು ಅನ್ವೇಷಿಸುವ ಸಂತಸದ ಕಲಿಕೆಯಾಗಿದೆ.

