ಮಡಿಕೇರಿ: ಪ್ರಕೃತಿಯ ಸೌಂದರ್ಯದ ಸ್ವರ್ಗ ಕೊಡಗು ಜಿಲ್ಲೆ ಇದೀಗ ಪ್ರವಾಸಿಗರ ದಟ್ಟಣೆಯಿಂದ ನಲುಗುತ್ತಿದೆಯೇ? ಜಿಲ್ಲೆಯ ಸ್ಥಳೀಯ ಜನಸಂಖ್ಯೆಗಿಂತ ಹಲವು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ವಾರಾಂತ್ಯದಲ್ಲಿ ಕೊಡಗಿಗೆ ಲಗ್ಗೆ ಇಡುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಸ್ಥಳೀಯರಿಗೆ ವಾಹನ ದಟ್ಟಣೆ, ಸಂಚಾರ ಸಮಸ್ಯೆ ಸೇರಿದಂತೆ ಹಲವು ರೀತಿಯ ಅನಾನುಕೂಲತೆಗಳು ಎದುರಾಗುತ್ತಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗು.. ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರ ಜಿಲ್ಲೆ. ಹಸಿರು ಬೆಟ್ಟಗುಡ್ಡಗಳು, ಕಾಫಿ ತೋಟಗಳು, ಜಲಪಾತಗಳು ಹಾಗೂ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ ಇದೇ ಪ್ರವಾಸೋದ್ಯಮ ಇದೀಗ ಸ್ಥಳೀಯರಿಗೆ ಒಂದಿಲ್ಲೊಂದು ಸಮಸ್ಯೆ ತಂದೊಡ್ಡುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಇದನ್ನೂ ಓದಿ: ಆಸ್ತಿ ರಾಜವಂಶಕ್ಕೆ ಸೇರಿದ್ದೋ, ಸರ್ಕಾರಕ್ಕೆ ಸೇರಿದ್ದೋ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ: ಯದುವೀರ್
ಜಿಲ್ಲೆಯ ಜನಸಂಖ್ಯೆ ಸುಮಾರು ಆರು ಲಕ್ಷದ ಆಸುಪಾಸಿನಲ್ಲಿದ್ದರೆ, ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಲಕ್ಷಾಂತರ ಪ್ರವಾಸಿಗರು ಕೊಡಗಿನತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿವೆ. ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದು, ಸ್ಥಳೀಯರ ದೈನಂದಿನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ.
ಇನ್ನು ಕೆಲವು ಪ್ರವಾಸಿಗರು ನಿಯಮಗಳನ್ನು ಪಾಲಿಸದೆ ಮನಬಂದಂತೆ ಸಂಚರಿಸುವುದು, ಪರಿಸರಕ್ಕೆ ಹಾನಿ ಉಂಟುಮಾಡುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಆರೋಪಗಳೂ ಕೇಳಿಬರುತ್ತಿವೆ.
ಇದರ ಜೊತೆಗೆ, ಗುಡ್ಡಗಾಡು ಪ್ರದೇಶಗಳಲ್ಲಿ ಅನಧಿಕೃತವಾಗಿ ಹೋಂಸ್ಟೇ ಹಾಗೂ ರೆಸಾರ್ಟ್ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ ಎಂಬುದು ಪರಿಸರವಾದಿಗಳ ಗಂಭೀರ ಆರೋಪ. ಪ್ರವಾಸಿಗರನ್ನೇ ಅವಲಂಬಿಸಿರುವ ಕೆಲವರು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸ್ಥಳೀಯರ ಹಿತಾಸಕ್ತಿ ಕಡೆಗಣನೆಯಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರವಾದಿಗಳು ಜಿಲ್ಲಾಡಳಿತದ ಮುಂದೆ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿಯಮಾನುಸಾರ ವರ್ಷಕ್ಕೆ ಗರಿಷ್ಠ ಮೂರು ಹೋಂಸ್ಟೇ ಅಥವಾ ರೆಸಾರ್ಟ್ಗಳಿಗೆ ಮಾತ್ರ ಹೊಸದಾಗಿ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು. ಪ್ರವಾಸಿ ತಾಣಗಳಿಗೆ ಪ್ರತಿದಿನ ನಿಗದಿತ ಸಂಖ್ಯೆಯ ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. 150ರಿಂದ 200 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡುವ ರೀತಿಯಲ್ಲಿ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು.
ಪ್ರವಾಸಿ ತಾಣಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಸಂಗ್ರಹಿಸಬೇಕು. ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಇಂತಹ ವ್ಯವಸ್ಥೆ ಜಾರಿಗೆ ಬಂದರೆ ಪ್ರವಾಸಿಗರ ದಟ್ಟಣೆಯನ್ನು ನಿಯಂತ್ರಿಸುವುದರ ಜೊತೆಗೆ ಪ್ರವಾಸಿ ತಾಣಗಳ ನಿರ್ವಹಣೆಗೂ ಆದಾಯ ದೊರೆಯಲಿದೆ. ಸರ್ಕಾರಕ್ಕೂ ಆದಾಯ ಹೆಚ್ಚಳವಾಗಲಿದೆ. ಮುಖ್ಯವಾಗಿ ಕೊಡಗಿನ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ.
ಒಟ್ಟಿನಲ್ಲಿ ಕೊಡಗಿನ ಪ್ರವಾಸೋದ್ಯಮ ಬೆಳೆಯಲಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ. ಆದರೆ ಪ್ರವಾಸೋದ್ಯಮದ ಬೆಳವಣಿಗೆಯ ಹೆಸರಿನಲ್ಲಿ ಕೊಡಗಿನ ಪರಿಸರ ನಾಶವಾಗಬಾರದು. ಸ್ಥಳೀಯರ ನೆಮ್ಮದಿಯ ಬದುಕಿಗೂ ಧಕ್ಕೆಯಾಗಬಾರದು. ಪ್ರವಾಸೋದ್ಯಮ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳುವಂತಹ ವೈಜ್ಞಾನಿಕ ಪ್ರವಾಸೋದ್ಯಮ ನೀತಿಯನ್ನು ಜಿಲ್ಲಾಡಳಿತ ರೂಪಿಸಬೇಕಿದೆ ಎಂಬುದು ಪರಿಸರವಾದಿಗಳ ಮನವಿಯಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ SIR ಬಳಿಕ ಮುಸ್ಲಿಂ ಮತದಾರರ ಸಂಖ್ಯೆ ಇಳಿಕೆ
