ನವದೆಹಲಿ: ಸಿಕ್ಕಿಂನಲ್ಲಿರುವ ಭಾರತ-ಚೀನಾ ಗಡಿಯಲ್ಲಿ ಯೋಧರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೀಪಾವಳಿ ಆಚರಿಸಿದ್ದಾರೆ.
ಭಾರತ-ಚೀನಾ ಗಡಿಯಲ್ಲಿರುವ ಸಿಕ್ಕಿಂನ ನಾಥುಲಾ ಬಳಿಯ ‘ಶೆರಾಥಾಂಗ್ ಯುದ್ಧ ಸ್ಮಾರಕ’ದಲ್ಲಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ರಾಜನಾಥ್ ಸಿಂಗ್ ದೀಪಾವಳಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರು, ದೇಶ ಸೇವೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಇದನ್ನೂ ಓದಿ: ಬಸ್ತಾರ್ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ – ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು ಎಂದ ಮೋದಿ
ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಮತ್ತು ಇತರ ಹಿರಿಯ ಸೇನಾ ಅಧಿಕಾರಿಗಳೊಂದಿಗೆ, ಪಶ್ಚಿಮ ಬಂಗಾಳದ ಸುಕ್ನಾ ಸೇನಾ ನೆಲೆ (ಆರ್ಮಿ ಬೇಸ್) ಯಿಂದ ಹೆಲಿಕಾಪ್ಟರ್ ಮೂಲಕ ಶೆರಾಥಾಂಗ್ಗೆ ಆಗಮಿಸಿದರು.
ಸೈನಿಕರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದ ಸಿಂಗ್, ಸ್ವತಃ ಯೋಧರಿಗೆ ಸಿಹಿತಿಂಡಿಗಳನ್ನು ತಿನ್ನಿಸಿದರು. ಅಲ್ಲದೇ, 1967ರಲ್ಲಿ ಭಾರತೀಯ ಮತ್ತು ಚೀನೀ ಪಡೆಗಳ ನಡುವೆ ನಡೆದ ನಾಥುಲಾ ಮತ್ತು ಚೋ ಲಾ ಸಂಘರ್ಷಗಳ ಸಂದರ್ಭದಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯ ಮತ್ತು ಮಾಡಿದ ತ್ಯಾಗವನ್ನು ಸ್ಮರಿಸಿದರು. ಇದೇ ವೇಳೆ, ಶೇರಾಥಾಂಗ್ ಯುದ್ಧ ಸ್ಮಾರಕದ (Sherathang War Memorial) ಬಳಿ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: `ಭಾರತ ರತ್ನ’ ಎಲ್.ಕೆ ಅಡ್ವಾಣಿಗೆ ಜನ್ಮಶತಮಾನೋತ್ಸವ ಸಂಭ್ರಮ – ರಾಜಕೀಯ ಗುರುವಿಗೆ ಪ್ರಧಾನಿ ಮೋದಿ ಅಕ್ಷರ ನಮನ
ಈ ದೇಶದ ಜನರಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ‘ಶೇರಥಾಂಗ್ ಯುದ್ಧ ಸ್ಮಾರಕ’ದ (Sherathang War Memorial) ಹುತಾತ್ಮರಿಗೆ ನಾನು ಗೌರವ ಸಲ್ಲಿಸುತ್ತೇನೆ. ಇಂದು ದೇಶವು ಶಾಂತಿಯುತವಾಗಿ ದೀಪಾವಳಿಯನ್ನು ಆಚರಿಸುತ್ತಿದೆಯೆಂದರೆ, ಅದಕ್ಕೆ ನಮ್ಮ ಸೇನಾ ಯೋಧರ ತ್ಯಾಗವೇ ಕಾರಣ. ನಮ್ಮ ಸೈನಿಕರ ಮುಗುಳ್ನಗೆ, ಉತ್ಸಾಹ ಮತ್ತು ಧೈರ್ಯವೇ ಈ ದೀಪಾವಳಿಯ ಅತಿ ದೊಡ್ಡ ಬೆಳಕುಗಳಾಗಿವೆ. ಶೇರಥಾಂಗ್ನಲ್ಲಿರುವ ಪ್ರತಿಯೊಬ್ಬ ಯೋಧನೂ ದೀಪಾವಳಿಯ ಒಂದು ದೀಪವಿದ್ದಂತೆ ಎಂದು ಸಚಿವರು ತಿಳಿಸಿದರು.
