ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (Lal Krishna Advani) ಅವರ ಜನ್ಮದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷ ಲೇಖನದ ಮೂಲಕ ಗೌರವ ಸಲ್ಲಿಸಿದ್ದಾರೆ. ಅಡ್ವಾಣಿ ಅವರ ರಾಜಕೀಯ ಪಯಣ, ಬಿಜೆಪಿಯ ಬೆಳವಣಿಗೆಯಲ್ಲಿ ಅವರ ಕೊಡುಗೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಒಡನಾಟ ಹಾಗೂ ಭಾರತೀಯ ರಾಜಕೀಯದ ಮೇಲೆ ಬೀರಿದ ಪ್ರಭಾವವನ್ನು ಸ್ಮರಿಸಿದ್ದಾರೆ.
1927ರ ನವೆಂಬರ್ 8ರಂದು ಕರಾಚಿಯಲ್ಲಿ ಜನಿಸಿದ ಎಲ್.ಕೆ. ಅಡ್ವಾಣಿ ಭಾನುವಾರ 99ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಜೀವನದ 100ನೇ ವರ್ಷವನ್ನು ಪ್ರವೇಶಿಸಿದ್ದಾರೆ. 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್ ತೊರೆದು ಭಾರತಕ್ಕೆ ಬರಬೇಕಾದ ಪರಿಸ್ಥಿತಿ ಎದುರಾದರೂ, ಹೊಸ ಜೀವನ ಆರಂಭಿಸಿ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಮೆಲುಕು ಹಾಕಿದರು.
ಆರ್ಎಸ್ಎಸ್ ಪ್ರಚಾರಕರಾಗಿ ರಾಜಕೀಯ ಜೀವನ ಆರಂಭಿಸಿದ ಅಡ್ವಾಣಿ, ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು. ಅವರ ಜೀವನವು ಆಧುನಿಕ ಭಾರತದ ಹಲವು ಪ್ರಮುಖ ರಾಜಕೀಯ ಅಧ್ಯಾಯಗಳೊಂದಿಗೆ ಬೆಸೆದುಕೊಂಡಿದೆ ಎಂದು ಬಣ್ಣಿಸಿದರು.
ಬಿಜೆಪಿಯ ಬೆಳವಣಿಗೆಯಲ್ಲಿ ಅಡ್ವಾಣಿ ಪಾತ್ರ ಸ್ಮರಣೆ:
ಬಿಜೆಪಿಯನ್ನು ದೇಶದ ಪ್ರಮುಖ ರಾಜಕೀಯ ಶಕ್ತಿಯಾಗಿ ರೂಪಿಸುವಲ್ಲಿ ಅಡ್ವಾಣಿ ಅವರ ಪಾತ್ರವನ್ನು ಪ್ರಧಾನಿ ಮೋದಿ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಅಡ್ವಾಣಿ ಅವರು ಪಕ್ಷದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಜೆಪಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. 1996ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಎಂದು ನೆನಪಿಸಿದ್ದಾರೆ.
‘ರಾಷ್ಟ್ರ ಮೊದಲು’ ಎಂಬ ತತ್ವದ ಆಧಾರದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿ, ಮುಂದಿನ ಪೀಳಿಗೆಯ ನಾಯಕರನ್ನು ಬೆಳೆಸುವಲ್ಲಿ ಅಡ್ವಾಣಿ ಶ್ರಮಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರ ದೀರ್ಘಕಾಲದ ರಾಜಕೀಯ ಒಡನಾಟವನ್ನೂ ಮೋದಿ ಸ್ಮರಿಸಿದ್ದಾರೆ. ಇಬ್ಬರೂ ಹಿರಿಯ ನಾಯಕರು ದಶಕಗಳ ಕಾಲ ಒಟ್ಟಾಗಿ ಕೆಲಸ ಮಾಡಿದ್ದು, ವೈಯಕ್ತಿಕ ಸ್ಥಾನಮಾನಗಳನ್ನು ಸ್ಪರ್ಧೆಯಾಗಿ ಪರಿಗಣಿಸದೆ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1991ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ಮೋದಿ ತಮ್ಮ ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ. ಗುಜರಾತ್ನ ಗಾಂಧಿನಗರ ಕ್ಷೇತ್ರದಿಂದ ಅಡ್ವಾಣಿ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಆಗ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮೋದಿ, ಅಡ್ವಾಣಿ ಅವರ ನಾಮಪತ್ರ ಸಿದ್ಧಪಡಿಸಲು ನೆರವಾಗಿದ್ದರಂತೆ. ಚುನಾವಣಾ ಪ್ರಚಾರದಲ್ಲಿಯೂ ಸಹಕರಿಸಿದ್ದರು. ಗಾಂಧಿನಗರದಲ್ಲಿ ಹಲವು ಬಾರಿ ಅಡ್ವಾಣಿ ಅವರಿಗೆ ಮತ ಚಲಾಯಿಸಿದ್ದಾಗಿ ತಿಳಿಸಿರುವ ಮೋದಿ, ತಮ್ಮ ಕ್ಷೇತ್ರದ ಜನರೊಂದಿಗೆ ಅವರು ಹೊಂದಿದ್ದ ಸಂಪರ್ಕ ಮತ್ತು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ಶ್ಲಾಘಿಸಿದ್ದಾರೆ. 1967ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ನ ಅಧ್ಯಕ್ಷರಾಗಿ ಅಡ್ವಾಣಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ರಾಜಸ್ಥಾನದ ವಿವಿಧ ಭಾಗಗಳಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿ ಸಂಘಟನಾ ಕೆಲಸ ಮಾಡಿದ್ದರು.
ತುರ್ತು ಪರಿಸ್ಥಿತಿ, ರಥಯಾತ್ರೆ ನೆನಪಿಸಿಕೊಂಡ ಪ್ರಧಾನಿ:
1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಹಾಗೂ ಆ ಸಂದರ್ಭದಲ್ಲಿ ಅಡ್ವಾಣಿ ಅವರು ಜೈಲು ಸೇರಿದ್ದ ದಿನಗಳನ್ನೂ ಮೋದಿ ಸ್ಮರಿಸಿದ್ದಾರೆ. ಅಡ್ವಾಣಿ ಬರೆದಿರುವ `ಎ ಪ್ರಿಸನರ್ಸ್ ಸ್ಕ್ರಾಪ್ಬುಕ್’ ಪುಸ್ತಕದಲ್ಲಿನ `ಎ ಟೇಲ್ ಆಫ್ ಟು ಎಮರ್ಜೆನ್ಸೀಸ್’ ಅಧ್ಯಾಯವನ್ನು ಉಲ್ಲೇಖಿಸಿದ್ದಾರೆ. ಈ ಅಧ್ಯಾಯದಲ್ಲಿ ಭಾರತದ ತುರ್ತು ಪರಿಸ್ಥಿತಿ ಹಾಗೂ 1933ರ ನಾಜಿ ಜರ್ಮನಿಯ ಘಟನೆಗಳ ಕುರಿತು ಚರ್ಚಿಸಲಾಗಿದೆ.
1977ರಲ್ಲಿ ಜನತಾ ಸರ್ಕಾರ ರಚನೆಯಾದ ಬಳಿಕ ಅಡ್ವಾಣಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೋದಿ ಹೇಳಿದ್ದಾರೆ.
ಅಡ್ವಾಣಿ ಅವರ ರಾಜಕೀಯ ಜೀವನದ ಪ್ರಮುಖ ಘಟ್ಟಗಳಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗಿನ ರಥಯಾತ್ರೆಯೂ ಒಂದು. ಈ ಯಾತ್ರೆಯ ಯೋಜನೆ ರೂಪಿಸುವ ಹಂತದಿಂದ ಹಿಡಿದು ಅನುಷ್ಠಾನದವರೆಗೂ ತಾವು ಭಾಗಿಯಾಗಿದ್ದನ್ನು ಮೋದಿ ನೆನಪಿಸಿಕೊಂಡಿದ್ದಾರೆ. ದೇಶದ ವಿವಿಧ ಭಾಗಗಳಿಗೆ ಸುದೀರ್ಘ ಪ್ರಯಾಣ ಕೈಗೊಂಡು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಡ್ವಾಣಿ ಅವರ ದೈಹಿಕ ಸಾಮರ್ಥ್ಯ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ಬಿಜೆಪಿಯಿಂದ ವಿಶೇಷ ಕಾರ್ಯಕ್ರಮ ಆಯೋಜನೆ:
ಅಡ್ವಾಣಿ ಅವರ 99ನೇ ಜನ್ಮದಿನದ ಅಂಗವಾಗಿ ಭಾನುವಾರ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಪೂಜೆ ಮತ್ತು ಹವನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಅಡ್ವಾಣಿ ಅವರ ಜೀವನ, ಭಾಷಣಗಳು ಮತ್ತು ರಾಜಕೀಯ ಪಯಣವನ್ನು ಒಳಗೊಂಡ 20 ನಿಮಿಷಗಳ ವಿಡಿಯೋ ಪ್ರದರ್ಶಿಸಲಾಗುತ್ತದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.


