– ಸರ್ಕಾರವೇ ಹೊಣೆ, ಮುಖ್ಯಮಂತ್ರಿಗಳೇ ಹೊಣೆ ಎಂದ ಛಲವಾದಿ ನಾರಾಯಣಸ್ವಾಮಿ
– ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ತರಕಾರಿ ಕಟ್ ಮಾಡಲು ಇಟ್ಕೊಳ್ತಿದ್ದೆ ಅಂತಾ ವ್ಯಂಗ್ಯ
ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರ ಸರ್ಕಾರಿ ನಿವಾಸದ ಬಳಿ ಚಾಕು-ಚೂರಿ ಇರುವ ಪೋಸ್ಟ್ ಕವರ್ಗಳನ್ನ ತಲುಪಿಸುವ ವಿಚಾರವಾಗಿ ಕೆಲಕಾಲ ಹೈಡ್ರಾಮಾ ನಡೆದಿದೆ. ಡೆಲಿವರಿ ಬಾಯ್ಸ್ ಹಾಗೂ ಎನ್ಎಸ್ಯುಐ ಕಾರ್ಯಕರ್ತರ ಆಗಮನದಿಂದ ನಿವಾಸದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿಯಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು-ಚೂರಿ ಇರುವ ಪೋಸ್ಟ್ ಕವರ್ಗಳನ್ನ ತಲುಪಿಸುವ ಪ್ರಯತ್ನ ನಡೆದಿದೆ. 4 ಬೈಕ್ಗಳಲ್ಲಿ ಬಂದ ಡೆಲಿವರಿ ಬಾಯ್ಸ್ (Delivery Boys) ಪೋಸ್ಟ್ ಕವರ್ಗಳನ್ನ ತಂದಿದ್ದರು. ಈ ವೇಳೆ ನಿವಾಸದ ಭದ್ರತಾ ಪೊಲೀಸರು ಡೆಲಿವರಿ ಬಾಯ್ಸ್ಗಳನ್ನ ತಡೆದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಡೆಲಿವರಿ ಬಾಯ್ಸ್ ಜೊತೆ ಬಂದಿದ್ದ ಇಬ್ಬರು NSUI ಕಾರ್ಯಕರ್ತರು ಕೂಡ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟ್ ಕವರ್ಗಳನ್ನ ಛಲವಾದಿ ನಾರಾಯಣಸ್ವಾಮಿ ಅವರಿಗೆ ನೀಡುವಂತೆ ಡೆಲಿವರಿ ಬಾಯ್ಸ್ಗಳಿಗೆ ಒತ್ತಾಯಿಸಿದ್ದಾರೆ. ಆದ್ರೆ, ಡೆಲಿವರಿ ಬಾಯ್ಸ್ಗಳು ಕವರ್ಗಳನ್ನ ನೀಡದೆ ವಾಪಸ್ ತೆರಳಲು ಮುಂದಾಗಿದ್ದಾರೆ. ಆದಾಗ್ಯೂ ಅವರನ್ನ ಹಿಂದಿರುಗಿ ಹೋಗಿ ಅವುಗಳನ್ನ ತಲುಪಿಸುವಂತೆ ಎನ್ಎಸ್ಯುಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಡೆಲಿವರಿ ಬಾಯ್ಸ್ಗಳನ್ನ ವಿಚಾರಣೆ ನಡೆಸಿದ ಪೊಲೀಸರು, ಅವರನ್ನುತರಾಟೆಗೆ ತೆಗೆದುಕೊಂಡು ಅಲ್ಲಿಂದ ಕಳುಹಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದ ಬಳಿಕ ಸ್ಥಳದಲ್ಲಿ ಕೆಲಕಾಲ ಇದ್ದ ಇಬ್ಬರು NSUI ಕಾರ್ಯಕರ್ತರು ಕೂಡ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ನನ್ನದು ಅಂಬೇಡ್ಕರ್ ರಕ್ತ
ಇನ್ನೂ ಘಟನೆ ಕುರಿತು ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ಅವರು, ಹೋಗ್ಲಿ ದುಡ್ಡು ಕೊಟ್ಟಾದ್ರೂ ಆರ್ಡರ್ ಮಾಡಿದ್ದಾರಾ..? ದುಡ್ಡು ಕೊಡದೇ ನನ್ನ ನಂಬರ್ ಕೊಟ್ಟು ಆರ್ಡರ್ ಮಾಡಿದ್ದಾರೆ. ಆನ್ಲೈನ್ ಡೆಲಿವರಿಬಾಯ್ಸ್ ಜೊತೆಗೆ ಎನ್ಎಸ್ಯುಐ ಹುಡುಗರು ಬಂದಿದ್ದಾರೆ. ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ತರಕಾರಿ ಕಟ್ ಮಾಡಲು ಇಟ್ಕೊಳ್ತಿದ್ದೆ. ನಿಮ್ಮ ಚಾಕು ಚೂರಿಗೆ ನಾನು ಹೆದರಲ್ಲ. ನಕಲಿ ದಲಿತ ರಕ್ತ ಅಲ್ಲ, ಅಂಬೇಡ್ಕರ್ ರಕ್ತ ನನ್ನದು ಎಂದು ಗುಡುಗಿದ್ದಾರೆ.
ನಿಮ್ ಯೋಗ್ಯತೆಗೆ ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ಕಾಂಗ್ರೆಸ್ ಕೊಡುಗೆ ಎಂದು ಫ್ರೇಮ್ ಹಾಕ್ಸಿ ಇಡ್ತಿದೆ. ದುಡ್ಡುಗೂ ನಿಮ್ ಹತ್ರ ಗತಿ ಇಲ್ವಾ..? ವಿನಯ್ ಕುಮಾರ್ ಎನ್ ಅನ್ನೋ ಹೆಸರಲ್ಲಿ ಆರ್ಡರ್ ಬುಕ್ ಆಗಿದೆ. ಮೊದಲು ನನ್ನ ಆಪ್ತ ಸಹಾಯಕ ಮಲ್ಲಪ್ಪ ಅವರಿಗೆ ಬುಕ್ ಮಾಡಿ ಕಳ್ಸಿದ್ದಾರೆ. ಬಹಳಷ್ಟು ಕ್ಯಾಶ್ ಆಂಡ್ ಡೆಲಿವರಿ ಅಂತಾ ಬುಕ್ ಮಾಡಿ ಕಳ್ಸಿದ್ದಾರೆ, ಕಾಂಗ್ರೆಸ್ ಕಮಂಗಿಗಳೇ ನಿಮ್ಗೆ ಹೇಳ್ತೀನಿ.. ಚಾಕು ಚೂರಿ ರಾಜಕಾರಣ ಮಾಡಬಾರದು. ನಿಮಗೆ ಜನರೇ ಬುದ್ಧಿ ಕಲಿಸ್ತಾರೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೇ ಕಳುಹಿಸಿದ್ದಾರೆ
ಸುಮಾರು 20 ಫೋನ್ ನಂಬರ್ ನಿಂದ ಮೆಸೇಜ್ ಗಳು, ಕಾಲ್ ಗಳು ಬಂದಿವೆ. ಇನ್ನೂ ಕಾಲ್ ಗಳು ಬರ್ತಿವೆ, ವಿನಯ್ ಹೆಸರು ಗೊತ್ತಾಗಿದೆ, ಇನ್ನೊಬ್ಬ ಚಂದ್ರ ಅಂತಾ ಹೆಸರು ಇದೆ. ಚಂದ್ರ ಹೆಸರಿನಿಂದ ಹಾಯ್ ಛಲವಾದಿ ಅಂತಾ ಹಾಕಿದ್ದಾರೆ, ಮತ್ತೊಂದು ಮೊಬೈಲ್ ನಿಂದ ಮೆಸೇಜ್ ಬಂದಿದೆ. ಇದಕ್ಕೆ ಸರ್ಕಾರವೇ ಹೊಣೆ, ಮುಖ್ಯಮಂತ್ರಿಗಳೇ ಹೊಣೆ, ಗೃಹ ಸಚಿವರು, ಕೆಪಿಸಿಸಿ ಅಧ್ಯಕ್ಷರೇ ಕಳುಹಿಸಿದ್ದಾರೆ. ಚಾಕು ಚೂರಿ ಅಂತಾ ತಂದಿದ್ದಾರೆ, ಅದಕ್ಕಾಗಿ ನಾನು ದೂರನ್ನು ಕೊಡ್ತೀನಿ ಅಂತಾ ಹೇಳಿದ್ದಾರೆ.

