ನವದೆಹಲಿ: ಅಕ್ಟೋಬರ್ 23ರಿಂದ ಕರ್ನಾಟಕವು ಕಾವೇರಿ ನದಿ ನೀರನ್ನು (Cauvery Water) ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್ಗೆ ತಮಿಳುನಾಡು ತುರ್ತು ಮನವಿ ಮಾಡಿದೆ. ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ್ದರೂ, ಕರ್ನಾಟಕ ನೀರು ಹರಿಸಿಲ್ಲ ಎಂದು ತಮಿಳುನಾಡು ಆರೋಪಿಸಿದೆ. ಇದನ್ನೂ ಓದಿ: ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ – ಶುಕ್ರವಾರ ಯಾದಗಿರಿ ಬಂದ್ಗೆ ಕರೆ
ಕಾವೇರಿ ನೀರು ಹರಿಸದ ಕಾರಣ 4 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ ಎಂದು ತಮಿಳುನಾಡು ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಕಾವೇರಿ ವಿವಾದದ ವಿಚಾರಣೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ತಮಿಳುನಾಡು ಮನವಿ ಮಾಡಿದೆ.
ಮನವಿಯನ್ನು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠ ಭರವಸೆ ಕೊಟ್ಟಿದೆ. ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿರುವ ಹಿನ್ನೆಲೆ ಇಂದು ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಸರ್ಕಾರ ತುರ್ತು ಮನವಿ ಮಾಡಿದೆ.
