– 225 ಪೋಕ್ಸೋ ಪ್ರಕರಣ ದಾಖಲು
ಮಡಿಕೇರಿ: ಕೊಡಗಿನಲ್ಲಿ ಅಪ್ರಾಪ್ತ ಬಾಲಕಿಯರ ಗರ್ಭಧಾರಣೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆತಂಕ ಮೂಡಿಸಿವೆ. ಕಳೆದ ಎರಡು ವರ್ಷಗಳಲ್ಲಿ 81 ಬಾಲಕಿಯರು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನೊಂದೆಡೆ, 225 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ತೋಟದ ಲೈನ್ಮನೆಗಳ ವ್ಯಾಪ್ತಿಯಲ್ಲೇ 97 ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆಯ ವರದಿ ತಿಳಿಸಿದೆ.
ಮಕ್ಕಳ ರಕ್ಷಣೆಗೆ ಕಾನೂನುಗಳಿವೆ, ಹಲವು ಇಲಾಖೆಗಳೂ ಕಾರ್ಯನಿರ್ವಹಿಸುತ್ತಿವೆ. ಆದರೂ ಇಂತಹ ಪ್ರಕರಣಗಳು ಏಕೆ ಸಂಭವಿಸುತ್ತಿವೆ? ಆದಿವಾಸಿ ಕುಟುಂಬಗಳ ವಸತಿ ಸಮಸ್ಯೆ, ಬಡತನ, ಲೈಂಗಿಕ ಶಿಕ್ಷಣದ ಕೊರತೆ ಹಾಗೂ ಜಾಗೃತಿಯ ಅಭಾವಕ್ಕೆ ಪರಿಹಾರವೇನು? ಈ ಕುರಿತ ವಿಶೇಷ ವರದಿ ಇಲ್ಲಿದೆ.
ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಮಕ್ಕಳ ಬಾಲ್ಯವೇ ಆತಂಕದ ನೆರಳಿಗೆ ಸಿಲುಕಿದೆ. ಓದಿ, ಆಟವಾಡಿ ಭವಿಷ್ಯದ ಕನಸು ಕಾಣಬೇಕಾದ ವಯಸ್ಸಿನಲ್ಲೇ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಕಳವಳ ಮೂಡಿಸಿವೆ. ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಧಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬಾಲ್ಯವಿವಾಹದಂತಹ ಘಟನೆಗಳು ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನ ಹುಟ್ಟುಹಾಕಿವೆ. ಅದರಲ್ಲೂ ಆದಿವಾಸಿ ಸಮುದಾಯ ಹಾಗೂ ತೋಟದ ಲೈನ್ಮನೆಗಳಲ್ಲಿ ವಾಸಿಸುವ ಕುಟುಂಬಗಳ ಮಕ್ಕಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
2 ವರ್ಷಗಳಲ್ಲಿ 81 ಬಾಲಕಿಯರು ಗರ್ಭಿಣಿಯಾಗಿರುವ ಮಾಹಿತಿ ಆತಂಕಕ್ಕೆ ಕಾರಣವಾಗಿದೆ. 225 ಪೋಕ್ಸೋ ಪ್ರಕರಣಗಳು ದಾಖಲಾಗಿರುವ ಬಗ್ಗೆಯೂ ವರದಿಯಾಗಿದೆ. ಈ ಪೈಕಿ ತೋಟದ ಲೈನ್ಮನೆಗಳ ವ್ಯಾಪ್ತಿಯಲ್ಲಿ 97 ಪ್ರಕರಣಗಳು ವರದಿಯಾಗಿವೆ.
ಒಂದೇ ಮನೆಯಲ್ಲಿ ಹಲವು ಕುಟುಂಬಗಳ ವಾಸ, ಮಕ್ಕಳಿಗೆ ಪ್ರತ್ಯೇಕ ಜಾಗದ ಕೊರತೆ, ಬಡತನದ ನಡುವೆ ಬದುಕು ಸಾಗಿಸುವ ಅನಿವಾರ್ಯತೆ, ಮಕ್ಕಳಿಗೆ ವಯಸ್ಸಿಗೆ ತಕ್ಕ ಲೈಂಗಿಕ ಶಿಕ್ಷಣ ಮತ್ತು ವೈಯಕ್ತಿಕ ಸುರಕ್ಷತೆಯ ಅರಿವು ಸಮರ್ಪಕವಾಗಿ ತಲುಪದಿರುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಕಾರ್ಮಿಕ ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ಇನ್ನು ಮಕ್ಕಳ ರಕ್ಷಣಾ ಇಲಾಖೆಯ ಮಾಹಿತಿಯ ಪ್ರಕಾರ, ಕೊಡಗು ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 95 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಏಪ್ರಿಲ್ವರೆಗೆ 26 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳಿಗಿಂತ ಪೋಕ್ಸೋ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಇಲಾಖೆ ತಿಳಿಸಿದೆ. ಪ್ರಕರಣಗಳು ಹೆಚ್ಚಾಗಿ ವರದಿಯಾಗುವ ಪ್ರದೇಶಗಳನ್ನು ಗುರುತಿಸಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಐಟಿಡಿಪಿ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆಗಳು, ಹಾಸ್ಟೆಲ್ಗಳು ಹಾಗೂ ಆದಿವಾಸಿ ಸಮುದಾಯಗಳ ನಡುವೆ ಮಕ್ಕಳ ರಕ್ಷಣೆ ಮತ್ತು ಕಾನೂನಿನ ಕುರಿತು ಅರಿವು ಮೂಡಿಸಲಾಗುತ್ತಿದೆ.
ಮಕ್ಕಳ ಸಹಾಯವಾಣಿ 1098 ಹಾಗೂ ಮಹಿಳಾ ಸಹಾಯವಾಣಿ 181 ಕುರಿತು ಮಾಹಿತಿ ನೀಡುವ ಮೂಲಕ ಸಂತ್ರಸ್ತರು ಮತ್ತು ಸಾರ್ವಜನಿಕರು ದೂರು ನೀಡಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಕಾನೂನು ಕ್ರಮ ಎಷ್ಟು ಮುಖ್ಯವೋ, ಅಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದೂ ಅಷ್ಟೇ ಮುಖ್ಯ. ಮಕ್ಕಳ ಬಾಲ್ಯ ಸುರಕ್ಷಿತವಾಗಿರಲಿ. ಅವರ ಹಕ್ಕುಗಳಿಗೆ ರಕ್ಷಣೆ ಸಿಗಲಿ. ಕಾನೂನು ಕ್ರಮದ ಜೊತೆಗೆ ಜಾಗೃತಿ ಮತ್ತು ಮೂಲಸೌಕರ್ಯಗಳ ಮೂಲಕ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿ. ಇದಕ್ಕಾಗಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ.

