ಚೆನ್ನೈ: ತಮಿಳುನಾಡು ನಿವಾಸಿಗಳಿಗೆ ಸಿಎಂ ವಿಜಯ್ (Vijay) ಅವರ ದೀಪಾವಳಿ ಉಡುಗೊರೆ ನೀಡಿದ್ದಾರೆ. ‘ವೆಟ್ರಿ’ (Vetri) ಯೋಜನೆಯಡಿ ತಮಿಳುನಾಡು ನಿವಾಸಿಗಳಿಗೆ 10 ಬಗೆಯ ಅಗತ್ಯ ತರಕಾರಿಗಳು ಕೇವಲ 100 ರೂಪಾಯಿಗೆ ಸಿಗಲಿದೆ.
ದೀಪಾವಳಿಯ ಸಮಯದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ‘ವೆಟ್ರಿ ವಿಶೇಷ ತರಕಾರಿ ಕಿಟ್’ (Vetri Special Vegetable Pack) ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ, ಅಗತ್ಯ ತರಕಾರಿಗಳ ಸಂಯೋಜನೆಯನ್ನು (combo) ರಾಜ್ಯ ಸರ್ಕಾರವು ಅತ್ಯಂತ ಕಡಿಮೆ ದರದಲ್ಲಿ (ಸಬ್ಸಿಡಿ ದರದಲ್ಲಿ) ಒದಗಿಸಲಿದೆ.
ತಮಿಳುನಾಡು ನಿವಾಸಿಗಳಿಗೆ ಸ್ವಲ್ಪಮಟ್ಟಿನ ನೆಮ್ಮದಿ ನೀಡುವ ಉದ್ದೇಶದಿಂದ ದೀಪಾವಳಿಗೂ ಮುನ್ನವೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜಧಾನಿ ಚೆನ್ನೈನ ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ, ಸಹಕಾರ ಸಚಿವ ವಿ. ಗಾಂಧಿರಾಜ್ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್; ತುಟ್ಟಿ ಭತ್ಯೆ ಹೆಚ್ಚಳ
‘ವೆಟ್ರಿ ಸ್ಪೆಷಲ್ ವೆಜಿಟೇಬಲ್ ಪ್ಯಾಕ್’ (Vetri Special Vegetable Pack) ಯೋಜನೆಯು ಮೂರು ದಿನಗಳ ಕಾಲ ಜಾರಿಯಲ್ಲಿರುತ್ತದೆ. ಗುರುವಾರದಂದು ಪೂಂಗಾ ನಗರ ಸಹಕಾರಿ ಸಗಟು ಮಳಿಗೆಯಲ್ಲಿ (Poonga Nagar Cooperative Wholesale Store) ಈ ತರಕಾರಿ ಪ್ಯಾಕ್ಗಳ ಮೊದಲ ಸೆಟ್ಗಳನ್ನು ವಿತರಿಸಲಾಯಿತು.
ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (Tamilaga Vettri Kazhagam) ಹೆಸರಿನ ಯೋಜನೆಯ ಮೂಲಕ, ಚೆನ್ನೈನಲ್ಲಿರುವ 218 ಆಯ್ದ ಸಹಕಾರಿ ಮಾರಾಟ ಮಳಿಗೆಗಳು ಮತ್ತು ನಾಲ್ಕು ಸಂಚಾರಿ ಘಟಕಗಳಲ್ಲಿ ವಿಶೇಷ ತರಕಾರಿ ಕಿಟ್ಗಳು ಲಭ್ಯವಾಗಲಿವೆ.
ಈ ವಿಶೇಷ ಮಾರಾಟವು ನವೆಂಬರ್ 5 ರಿಂದ 7 ರವರೆಗೆ, ಅಂದರೆ ಮೂರು ದಿನಗಳ ಕಾಲ ತಮಿಳುನಾಡಿನಾದ್ಯಂತ ಆಯ್ಕೆ ಮಾಡಲಾದ 218 ಸಹಕಾರಿ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನಡೆಯಲಿದೆ. ರಾಜ್ಯ ರಾಜಧಾನಿಯಲ್ಲಿ ಹೆಚ್ಚಿನ ಜನರಿಗೆ ತಲುಪುವ ಉದ್ದೇಶದಿಂದ, ಚೆನ್ನೈನ ವಿವಿಧ ಬಡಾವಣೆಗಳಲ್ಲಿ ಈ ಪ್ಯಾಕ್ಗಳನ್ನು ವಿತರಿಸಲು ಸರ್ಕಾರವು ನಾಲ್ಕು ಸಂಚಾರಿ ತರಕಾರಿ ಮಾರಾಟ ವಾಹನಗಳನ್ನು ನಿಯೋಜಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ರೈತರಿಗೆ ದೀಪಾವಳಿ ಗಿಫ್ಟ್ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ
ಬ್ಯಾಗ್ನಲ್ಲಿ 100 ರೂ.ಗೆ 2.55 ಕೆಜಿಯಿಂದ 2.60 ಕೆಜಿ ತರಕಾರಿ ಸಿಗಲಿದೆ. ಹಬ್ಬದ ಸಮಯದಲ್ಲಿ ಮುಕ್ತ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತಗಳಿಂದ ಸಾರ್ವಜನಿಕರನ್ನು ರಕ್ಷಿಸಲು, ಈ ಪ್ಯಾಕ್ನಲ್ಲಿ ತಾಜಾ, ಆಯ್ದ ಮತ್ತು ನೈರ್ಮಲ್ಯಯುತವಾಗಿ ಪ್ಯಾಕ್ ಮಾಡಲಾದ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ಈರುಳ್ಳಿ: 500 ಗ್ರಾಂ, ಟೊಮೆಟೊ: 500 ಗ್ರಾಂ, ಬದನೆಕಾಯಿ: 250 ಗ್ರಾಂ, ಆಲೂಗಡ್ಡೆ: 250 ಗ್ರಾಂ, ಕ್ಯಾರೆಟ್: 200 ಗ್ರಾಂ, ಬೀನ್ಸ್: 200 ಗ್ರಾಂ, ಹಸಿ ಮೆಣಸಿನಕಾಯಿ: 100 ಗ್ರಾಂ, ನಿಂಬೆಹಣ್ಣು: 100 ಗ್ರಾಂ, ಶುಂಠಿ: 50 ಗ್ರಾಂ ಮತ್ತು ತೆಂಗಿನಕಾಯಿ: 1 ಕಾಯಿ (400 ಗ್ರಾಂನಿಂದ 450 ಗ್ರಾಂ ತೂಕದ್ದು) ಇರಲಿದೆ.
