– ದೀಪಾವಳಿ ಹಬ್ಬದ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ್ದ ಧನ್ವೀರ್
ಬೆಂಗಳೂರು: ವಿಜಯಲಕ್ಷ್ಮಿ (Vijayalakshmi) ಮತ್ತು ಧನ್ವೀರ್ (Dhanveer) ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿ ನಟ ಧನ್ವೀರ್ ಮಾಡಿದ್ದ ಮನವಿಗೆ ಪೊಲೀಸರು ಸ್ಪಂದಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ, ಹೆಚ್ಚಿನ ಕಾಲಾವಕಾಶ ನೀಡುವಂತೆ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಧನ್ವೀರ್ ಅವರ ಮನವಿಯನ್ನು ಪರಿಗಣಿಸಿದ ಪೊಲೀಸರು ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡಿದ್ದಾರೆ. ಅದರಂತೆ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಧನ್ವೀರ್ ಅವರಿಗೆ ಪೊಲೀಸರು 2ನೇ ನೋಟಿಸ್ ನೀಡಿದ್ದಾರೆ.
ಈ ಹಿಂದೆ ನವೆಂಬರ್ 11ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೀಗ ಧನ್ವೀರ್ ಅವರ ಮನವಿಯ ಹಿನ್ನೆಲೆ ವಿಚಾರಣೆಯ ದಿನಾಂಕವನ್ನು ನವೆಂಬರ್ 12ಕ್ಕೆ ನಿಗದಿಪಡಿಸಲಾಗಿದೆ.
ಧನ್ವೀರ್ಗೆ ಮತ್ತೊಂದು ಸಂಕಷ್ಟ
ಈ ಮಧ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣದಲ್ಲಿ ನಟ ಧನ್ವೀರ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ವಿಡಿಯೋ ವೈರಲ್ ಮಾಡುವಲ್ಲಿ ಧನ್ವೀರ್ ಅವರ ಮೊಬೈಲ್ ಬಳಕೆಯಾಗಿದೆ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸರಿಗೆ ಮೊಬೈಲ್ ರಿಟ್ರೀವ್ ವರದಿ ಕೈ ಸೇರಿದೆ.
ವಿಡಿಯೋ ವೈರಲ್ ಮಾಡಿದ ಆರೋಪದ ಹಿನ್ನೆಲೆ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ, ಅಳಿಸಲಾದ ಡೇಟಾವನ್ನು ಮರುಪಡೆಯಲು ಪೊಲೀಸರು ಮುಂದಾಗಿದ್ದರು.
ಇದೀಗ ಮೊಬೈಲ್ ರಿಟ್ರೀವ್ ವರದಿ ಸಿಸಿಬಿ ಪೊಲೀಸರ ಕೈ ಸೇರಿದ್ದು, ಧನ್ವೀರ್ ಅವರ ಮೊಬೈಲ್ನಿಂದಲೇ ವಿಡಿಯೋ ವೈರಲ್ ಆಗಿರುವುದಕ್ಕೆ ಸಾಕ್ಷ್ಯ ದೊರೆತಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಬಂಧನ ವಾರಂಟ್ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

