ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ‘ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ’ (Neil Gehrels Swift Observatory) ಹೆಸರಿನ ಈ ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಬೆಂಗಳೂರು ಸೇರಿದಂತೆ ಭಾರತದ ಹಲವು ನಗರಗಳೂ ಸೇರಿವೆ.
ಭಾರತೀಯ ಕಾಲಮಾನ ಮಧ್ಯಾಹ್ನ ಸುಮಾರು 2 ಗಂಟೆ ಒಳಗಡೆ ಉಪಗ್ರಹ ಭೂಮಿಯ ವಾತಾವರಣ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವೇಳೆ ಉಂಟಾಗುವ ತೀವ್ರ ಶಾಖದಿಂದ ಉಪಗ್ರಹದ ಬಹುತೇಕ ಭಾಗಗಳು ಸುಟ್ಟು ನಾಶವಾಗುವ ಸಾಧ್ಯತೆಯಿದೆ. ಆದರೆ, ಕೆಲವು ಗಟ್ಟಿಯಾದ ಲೋಹದ ಬಿಡಿಭಾಗಗಳು ಭೂಮಿಯ ಮೇಲ್ಮೈ ತಲುಪುವ ಸಾಧ್ಯತೆಯೂ ಇದೆ.
ಸಂಭಾವ್ಯ ವಲಯದಲ್ಲಿ ಬೆಂಗಳೂರು, ಮುಂಬೈ, ಚೆನ್ನೈ
ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದನ್ನು ಸದ್ಯಕ್ಕೆ ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಆಗ್ನೇಯ ಏಷ್ಯಾ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳು ಸೇರಿವೆ.
ಭಾರತದ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ನಗರಗಳೂ ಈ ಸಂಭಾವ್ಯ ವಲಯದ ವ್ಯಾಪ್ತಿಯಲ್ಲಿವೆ. ಆದರೆ ಈ ನಗರಗಳ ಮೇಲೆಯೇ ಉಪಗ್ರಹದ ಅವಶೇಷಗಳು ಬೀಳುತ್ತವೆ ಎಂದರ್ಥವಲ್ಲ. ನಿಖರವಾದ ಸ್ಥಳದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೆಚ್ಚಿನ ಅವಶೇಷಗಳು ಜನವಸತಿಯಿಲ್ಲದ ಸಮುದ್ರ ಪ್ರದೇಶಕ್ಕೆ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಉಪಗ್ರಹದ ಕೆಲ ಚೂರುಗಳು ಆಸ್ಟ್ರೇಲಿಯಾ, ಅಗ್ನೇಯ ಏಷ್ಯಾ, ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಾದರೂ ಪತನವಾಗಬಹುದು ಎನ್ನಲಾಗಿದೆ. ಇದು ನಿರ್ಧರಿತವಾಗುವುದು, ಟೆಲಿಸ್ಕೋಪ್ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಯಾವ ಭಾಗ ದಲ್ಲಿರುತ್ತದೆ ಎಂಬುದರ ಮೇಲೆ. ಕೆಲ ತಜ್ಞರ ಪ್ರಕಾರ, ದೂರದರ್ಶಕದ ಅವಶೇಷಗಳು ಸಮುದ್ರಕ್ಕೆ ಬೀಳಬಹುದು.
22 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಉಪಗ್ರಹ
ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿಯನ್ನು 2004ರ ನವೆಂಬರ್ 20ರಂದು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಆರಂಭದಲ್ಲಿ ಕೇವಲ ಎರಡು ವರ್ಷಗಳ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದ್ದ ಈ ಉಪಗ್ರಹ ಬರೋಬ್ಬರಿ 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಸುಮಾರು 1.5 ಟನ್ ತೂಕ ಹೊಂದಿರುವ ಇದು ಬಾಹ್ಯಾಕಾಶದಲ್ಲಿನ ಗಾಮಾ ಕಿರಣಗಳ ಸ್ಫೋಟ ಮತ್ತು ಸೂಪರ್ನೋವಾ ಘಟನೆಗಳ ಅಧ್ಯಯನದಲ್ಲಿ ಮಹತ್ವದ ಕೊಡುಗೆ ನೀಡಿದೆ.
ಉಪಗ್ರಹದ ಪ್ರಮುಖ ಸಾಧನೆಗಳು
ಬಾಹ್ಯಾಕಾಶದಲ್ಲಿನ ಗಾಮಾ ಕಿರಣಗಳ ಸ್ಫೋಟಗಳನ್ನು (Gamma Ray Bursts) ಅಧ್ಯಯನ ಮಾಡುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಈ ಉಪಗ್ರಹವು 2,000ಕ್ಕೂ ಹೆಚ್ಚು ಗಾಮಾ ಕಿರಣಗಳ ಸ್ಫೋಟಗಳನ್ನು ಅಧ್ಯಯನ ಮಾಡಿದೆ. ಅಷ್ಟೇ ಅಲ್ಲ, 1,400ಕ್ಕೂ ಹೆಚ್ಚು ಸೂಪರ್ನೋವಾ ಘಟನೆಗಳ ವೀಕ್ಷಣೆಗೆ ಕೊಡುಗೆ ನೀಡಿದೆ.
ಆರಂಭದಲ್ಲಿ ಎರಡು ವರ್ಷಗಳ ಕಾರ್ಯಾಚರಣೆಗೆ ವಿನ್ಯಾಸಗೊಂಡಿದ್ದರೂ ಸುಮಾರು 22 ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಿದೆ.
