ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿಬೆಟ್ಟ ವಲಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆಯ ಕಳೇಬರ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯ ಗಡಿಯಿಂದ ಸುಮಾರು 150 ಮೀಟರ್ ದೂರದ ಖಾಸಗಿ ಸರ್ವೇ ನಂ-155ರಲ್ಲಿ ಸುಮಾರು 35 ವರ್ಷ ವಯಸ್ಸಿನ ಆನೆ ಕಳೇಬರ ಪತ್ತೆಯಾಗಿದ್ದು, ಮೃತ ಆನೆಯ ಹೊಟ್ಟೆಯಲ್ಲಿ ಒಂದು ವರ್ಷ ವಯಸ್ಸಿನ ಮರಿಯಿರುವುದು ಕಂಡುಬಂದಿತು. ಮಸ್ತಿಗೆ ಬಂದ ಕಾಡಾನೆಯೊಂದಿಗೆ ಮಿಲನಕ್ಕೆ ಸಮ್ಮತಿಸದ ಹಿನ್ನೆಲೆಯಲ್ಲಿ ಅದು ಬೆನ್ನಿಗೆ ಸೊಂಡಲಿನಿಂದ ಹೊಡೆದ ರಭಸಕ್ಕೆ ಮೂಳೆ ಮುರಿದು ಸಾವಿಗೀಡಾಗಿದೆ ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ.
ಮಾಹಿತಿ ಅರಿತ ಕೂಡಲೇ ಗೋಪಾಲಸ್ವಾಮಿಬೆಟ್ಟ ವಲಯದ ಆರ್ಎಫ್ಒ ಸತೀಶ್ ಕುಮಾರ್, ಎಸಿಎಫ್ ಶುಭಂ ಸಿಂಗ್ ತನ್ವರ್ ಹಾಗೂ ಅರಣ್ಯ ಇಲಾಖೆಯ ಪಶುವೈದ್ಯ ಡಾ.ಮಿರ್ಜಾ ವಾಸಿಂ ಸ್ಥಳಕ್ಕೆ ತೆರಳಿದ ಮೃತ ಆನೆ ಕಳೇಬರ ಪರಿಶೀಲಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
