– ಐಐಎಸ್ಸಿ ಬೆಂಗಳೂರು ಮತ್ತು ಡೆನ್ಮಾರ್ಕ್ ವಿಜ್ಞಾನಿಗಳಿಂದ ಮಹತ್ವದ ಸಂಶೋಧನೆ
ಭಾರತದಲ್ಲಿ ಕಂಡುಬರುವ ವಿವಿಧ ಜಾತಿಯ ನಾಗರಹಾವುಗಳ ವಿಷದ ಸಂಯೋಜನೆ ಒಂದೇ ರೀತಿಯಾಗಿರುವುದಿಲ್ಲ. ಒಂದೇ ಜಾತಿಯ ಹಾವುಗಳ ವಿಷದಲ್ಲೂ ಅವು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಾಸಗಳಿರಬಹುದು. ಹೀಗಿರುವಾಗ ವಿವಿಧ ಜಾತಿಯ ನಾಗರಹಾವುಗಳ ಕಡಿತಕ್ಕೂ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಲ್ಲ ಹೊಸ ಆಂಟಿವೆನಮ್ (ಪ್ರತಿವಿಷ) ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಪರಿಸರ ವಿಜ್ಞಾನ ಕೇಂದ್ರ (CES) ಹಾಗೂ ಡೆನ್ಮಾರ್ಕ್ನ ತಾಂತ್ರಿಕ ವಿಶ್ವವಿದ್ಯಾಲಯದ (DTU) ವಿಜ್ಞಾನಿಗಳು ಈ ಮಹತ್ವದ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆಯ ವಿವರಗಳು ಕಳೆದ ತಿಂಗಳು ಸೈನ್ಸ್ ಟ್ರಾನ್ಸ್ಲೇಷನಲ್ ಮೆಡಿಸಿನ್ (Science Translational Medicine) ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.
ಭಾರತದ ನಾಗರಹಾವು ಮತ್ತು ರಾಜ ನಾಗರಹಾವುಗಳ ವಿಷಕ್ಕೆ ಒಡ್ಡಲ್ಪಟ್ಟ ಇಲಿಗಳನ್ನು ರಕ್ಷಿಸುವ ಒಲಿಗೋಕ್ಲೋನಲ್ ನ್ಯಾನೊಬಾಡಿ ಆಧಾರಿತ ಮರುಸಂಯೋಜಿತ ವಿಷನಿರೋಧಕ ಔಷಧಿ (ಆಂಟಿವೆನಮ್) ಎಂಬ ಶೀರ್ಷಿಕೆಯ ಸಂಶೋಧನಾ ಪ್ರಬಂಧದಲ್ಲಿ ಹೊಸ ಆಂಟಿವೆನಮ್ ಅಭಿವೃದ್ಧಿ ಮತ್ತು ಅದರ ಪರಿಣಾಮಕಾರಿತ್ವವನ್ನು ವಿವರಿಸಲಾಗಿದೆ.
ಹಾಗಾದರೆ, ವಿವಿಧ ನಾಗರಹಾವುಗಳ ವಿಷ ಮನುಷ್ಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಹಾವು ಕಡಿತಕ್ಕೆ ಚಿಕಿತ್ಸೆ ನೀಡುವಲ್ಲಿ ಎದುರಾಗುವ ಸವಾಲುಗಳೇನು? ಹೊಸ ಆಂಟಿವೆನಮ್ ಅನ್ನು ವಿಜ್ಞಾನಿಗಳು ಹೇಗೆ ಅಭಿವೃದ್ಧಿಪಡಿಸಿದ್ದಾರೆ? ಮುಂದೆ ಈ ಸಂಶೋಧನೆಯಿಂದ ಏನೆಲ್ಲಾ ಪ್ರಯೋಜನವಾಗಬಹುದು? ಎಂಬುದನ್ನ ತಿಳಿಯೋಣ, ಅದಕ್ಕೂ ಮುನ್ನ ಕರ್ನಾಟಕದಲ್ಲಿ ಇರುವ ವಿಷಕಾರಿ ಹಾವುಗಳ ಬಗ್ಗೆ ತಿಳಿಯೋಣ…
ಕರ್ನಾಟಕದಲ್ಲಿರುವ ವಿಷಕಾರಿ ಹಾವುಗಳು ಯಾವುದು?
ದೇಶದಲ್ಲಿ 300 ಹಾಗೂ ರಾಜ್ಯದಲ್ಲಿ 90 ಪ್ರಭೇದದ ಹಾವುಗಳು ಇರುವುದನ್ನ ಗುರುತಿಸಲಾಗಿದೆ. ಅವುಗಳಲ್ಲಿ 20 ಪ್ರಭೇದದ ಹಾವುಗಳು ಮಾತ್ರ ವಿಷಪೂರಿತ ಹಾವುಗಳಾಗಿವೆ. ಕರ್ನಾಟಕದಲ್ಲಿ ನಾಗರ ಹಾವು, ಕೊಳಕು ಮಂಡಲ, ಕಾಳಿಂಗ ಸರ್ಪ, ರಕ್ತ ಮಂಡಲ, ಕಟ್ ಹಾವು, ಕಾಳಿಂಗ ಸರ್ಪ, ಗರಗಸದ ಹಾವೂ ಹಾಗೂ ಸಮುದ್ರ ತೀರದಲ್ಲಿ ಕಂಡುಬರುವ ಕಡಲ ಹಾವು ಅಂತ್ಯ ವಿಷಕಾರಿ.
ವಿವಿಧ ಜಾತಿಯ ನಾಗರಹಾವುಗಳ ವಿಷ ಯಾವ ಪರಿಣಾಮ ಬೀರುತ್ತದೆ?
ಭಾರತದಲ್ಲಿ ನಾಗರಹಾವಿನ ಹಲವು ಪ್ರಭೇದಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಇವುಗಳ ವಿಷದಲ್ಲಿರುವ ‘ನ್ಯೂರೋಟಾಕ್ಸಿನ್’ (Neurotoxin) ನರಮಂಡಲದ ಮೇಲೆ ಪರಿಣಾಮ ಬೀರುವ ವಿಷಕಾರಿ ಅಂಶಗಳಾಗಿರುತ್ತವೆ. ಬೇಟೆಯಾಡುವ ಪ್ರಾಣಿಗಳನ್ನು ಪಾರ್ಶ್ವವಾಯುವಿಗೆ ತಳ್ಳುತ್ತವೆ. ಇದರಿಂದ ದೇಹದ ಸ್ನಾಯುಗಳು ನಿಷ್ಕ್ರಿಯಗೊಂಡು ಸಾವು ಸಂಭವಿಸುತ್ತದೆ.
ಮನುಷ್ಯರಿಗೆ ನಾಗರಹಾವು ಕಡಿದಾಗಲೂ ಇದೇ ರೀತಿಯ ಪರಿಣಾಮಗಳು ಉಂಟಾಗಬಹುದು. ಕೆಲವು ಪ್ರಕರಣಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಇತರ ಅಡ್ಡಪರಿಣಾಮಗಳೂ ಕಾಣಿಸಿಕೊಂಡಿವೆ. 2024ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ್ದ ಮಾಹಿತಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಹಾವು ಕಡಿತದಿಂದ ಅಂದಾಜು 50,000 ಮಂದಿ ಮೃತಪಟ್ಟಿದ್ದಾರೆ.
ಭಾರತದ ನಾಲ್ಕು ಪ್ರಮುಖ ವಿಷಕಾರಿ ಹಾವುಗಳ (Big Four) ಪೈಕಿ ಕನ್ನಡಕ ನಾಗರಹಾವು (Spectacled Cobra) ಕೂಡ ಒಂದಾಗಿದೆ. ಉಳಿದ ಮೂರು ಹಾವುಗಳೆಂದರೆ ಕಟ್ಟು ಹಾವು (Common Krait), ಕೊಳಕು ಮಂಡಲ (Russell’s Viper) ಮತ್ತು ಗರಗಸ ಹುರುಪೆ ಹಾವು (Saw-scaled Viper). ಒಂದೇ ಪ್ರಭೇದದ ನಾಗರಹಾವುಗಳ ವಿಷದಲ್ಲೂ ಅವು ವಾಸಿಸುವ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಾಸ ಕಂಡುಬರಬಹುದು.
ದೇಶದಲ್ಲಿ ಸಂಭವಿಸುವ ಹಾವು ಕಡಿತದ ಸಾವುಗಳಲ್ಲಿ ಕನಿಷ್ಠ ಶೇ.12.5ರಷ್ಟು ಪ್ರಕರಣಗಳಿಗೆ ಕನ್ನಡಕ ನಾಗರಹಾವು ಕಾರಣವಾಗಿದೆ. ಆದರೆ, ಸಂತ್ರಸ್ತರಿಗೆ ಹಾವು ಯಾವ ಪ್ರಭೇದದ್ದು ಎಂಬುದು ತಿಳಿಯದಿರುವ ಸಂದರ್ಭಗಳೂ ಇರುವುದರಿಂದ ಈ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಹಾವು ಕಡಿತಕ್ಕೆ ಚಿಕಿತ್ಸೆ ನೀಡುವಲ್ಲಿ ಎದುರಾಗುವ ಸವಾಲುಗಳೇನು?
ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿದೆ. ಉದಾಹರಣೆಗೆ, ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಪಾಲಿವ್ಯಾಲೆಂಟ್ ಆಂಟಿವೆನಮ್ (Polyvalent Antivenom) ನಾಲ್ಕು ಪ್ರಮುಖ ವಿಷಕಾರಿ ಹಾವುಗಳ ವಿಷವನ್ನು ನಿಷ್ಕ್ರಿಯಗೊಳಿಸಲು ಬಳಸಲಾಗುತ್ತದೆ. ಇದರಲ್ಲಿ ಕನ್ನಡಕ ನಾಗರಹಾವಿನ ವಿಷವೂ ಸೇರಿದೆ. ಆದರೆ, ಇದೇ ಆಂಟಿವೆನಮ್ ಕಿಂಗ್ ಕೊಬ್ರಾ (King Cobra) ವಿಷದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವುದಿಲ್ಲ. ಅಷ್ಟೇ ಅಲ್ಲ ಈಗ ಥಾಯ್ಲೆಂಡ್ನಲ್ಲಿ ಕಾಣಸಿಗುವ ಕಾಳಿಂಗ ಸರ್ಪಕ್ಕೆ ಅಭಿವೃದ್ಧಿಪಡಿಸಿದ ಪ್ರತಿವಿಷ ಭಾರತದಲ್ಲಿ ಸಿಗುವ ಕಾಳಿಂಗ ಸರ್ಪಗಳ ವಿಷದ ವಿರುದ್ಧ ಹೋರಾಡದೇ ಇರಬಹುದು. ಇದರಿಂದಾಗಿ ಒಂದು ಪ್ರದೇಶದ ಹಾವಿನ ವಿಷಕ್ಕೆ ಅಭಿವೃದ್ಧಿಪಡಿಸಿದ ಆಂಟಿವೆನಮ್ ಮತ್ತೊಂದು ಪ್ರದೇಶದ ಅದೇ ಪ್ರಭೇದದ ಹಾವಿನ ವಿಷದ ವಿರುದ್ಧ ಪರಿಣಾಮಕಾರಿಯಾಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದರ ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಹಾವು ಕಡಿತಕ್ಕೆ ಒಳಗಾದವರು ಸಕಾಲದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಾಗದಿರುವುದು ಮತ್ತೊಂದು ಸಮಸ್ಯೆ. ಕೆಲವರು ಅಗತ್ಯವಾದ ಆಂಟಿವೆನಮ್ ಲಭ್ಯವಿಲ್ಲದ ಆರೋಗ್ಯ ಕೇಂದ್ರಗಳಿಗೆ ತೆರಳುವುದರಿಂದ ಚಿಕಿತ್ಸೆಯೂ ವಿಳಂಬವಾಗುತ್ತದೆ.
ಈ ಕುರಿತು ಮಾತನಾಡಿರುವ IIScಯ ಪರಿಸರ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕ ಹಾಗೂ ಸಂಶೋಧನಾ ತಂಡದ ಸದಸ್ಯ ಕಾರ್ತಿಕ್ ಸುನಗರ್ ಅವರ ಪ್ರಕಾರ, ಕಳೆದ ಸುಮಾರು ಒಂದು ಶತಮಾನದಿಂದಲೂ ಆಂಟಿವೆನಮ್ ಚಿಕಿತ್ಸಾ ವಿಧಾನದಲ್ಲಿ ದೊಡ್ಡ ಬದಲಾವಣೆಗಳಾಗಿಲ್ಲ.
ಹೊಸ ಆಂಟಿವೆನಮ್ ಅಭಿವೃದ್ಧಿಪಡಿಸಿದ್ದು ಹೇಗೆ?
ಈ ಹಿಂದೆ ಡೆನ್ಮಾರ್ಕ್ನ ವಿಜ್ಞಾನಿ ಆಂಡ್ರಿಯಾಸ್ ಲಾಸ್ಟ್ಸನ್ ಹಾಗೂ ಡೆನ್ಮಾರ್ಕ್ನ ತಾಂತ್ರಿಕ ವಿಶ್ವವಿದ್ಯಾಲಯದ ಅವರ ಸಹೋದ್ಯೋಗಿಗಳು ಆಫ್ರಿಕಾದ ಕೆಲವು ವಿಷಕಾರಿ ಹಾವುಗಳ ವಿರುದ್ಧ ಹೊಸ ಚಿಕಿತ್ಸಾ ವಿಧಾನವನ್ನ ಪರೀಕ್ಷಿಸಿದ್ದರು. ಇದಕ್ಕಾಗಿ ಅವರು ಅಲ್ಪಾಕಾ (Alpaca) ಮತ್ತು ಲಾಮಾ (Llama) ಸೇರಿದಂತೆ ಸಾಕುಪ್ರಾಣಿಗಳಿಗೆ ಹಾವಿನ ವಿಷವನ್ನ ಪರೀಕ್ಷಿಸಿದ್ದರು. ವಿಷದ ವಿರುದ್ಧ ಈ ಪ್ರಾಣಿಗಳ ದೇಹದಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳನ್ನು (Antibodies) ಪ್ರತ್ಯೇಕವಾಗಿ ಸಂಗ್ರಹಿಸಿದ್ದರು. ಮುಂದೆ ಈ ಪ್ರತಿಕಾಯಗಳನ್ನು ಬ್ಯಾಕ್ಟೀರಿಯೊಫೇಜ್ಗಳ (Bacteriophages) ಮೇಲೆ ಪ್ರದರ್ಶಿಸಿ, ವಿವಿಧ ಹಾವುಗಳ ವಿಷಕ್ಕೆ ಒಡ್ಡಲಾಗಿತ್ತು. ವಿಷದಲ್ಲಿರುವ ಅಪಾಯಕಾರಿ ಅಂಶಗಳನ್ನು ಗುರುತಿಸಿ ಅವುಗಳಿಗೆ ಬಂಧಿಸುವ ಹಾಗೂ ಅವುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿರುವ ನಿರ್ದಿಷ್ಟ ಪ್ರತಿಕಾಯದ ತುಣುಕುಗಳನ್ನು ವಿಜ್ಞಾನಿಗಳು ಪ್ರತ್ಯೇಕಿಸಿದ್ದರು. ಇಲ್ಲಿ ಬ್ಯಾಕ್ಟೀರಿಯೊಫೇಜ್ ಎಂದರೆ ಬ್ಯಾಕ್ಟೀರಿಯಾಗಳಿಗೆ ಸೋಂಕು ತಗುಲಿಸಿ ಅವುಗಳ ಒಳಗೆ ವೃದ್ಧಿಯಾಗುವ ಒಂದು ರೀತಿಯ ವೈರಸ್.
ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿನ ವಿವಿಧ ನಾಗರಹಾವು ಪ್ರಭೇದಗಳ ವಿರುದ್ಧವೂ ಹೊಸ ಆಂಟಿವೆನಮ್ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮುಂದಾದರು. ಭಾರತದ ವಿವಿಧ ನಾಗರಹಾವುಗಳ ವಿಷಕ್ಕೆ ಪ್ರತಿಕ್ರಿಯಿಸುವಂತೆ ಆಯ್ದ ಪ್ರತಿಕಾಯಗಳನ್ನು ಸಂಯೋಜಿಸಿ ‘ಆಂಟಿಬಾಡಿ ಕಾಕ್ಟೇಲ್’ (Antibody Cocktail) ಸಿದ್ಧಪಡಿಸಿದರು.
ಸಾವು ಗೆದ್ದ ಇಲಿಗಳು
ನಂತರ ಈ ಪ್ರತಿಕಾಯ ಮಿಶ್ರಣವನ್ನು ಇಲಿಗಳ ಮೇಲೆ ಪ್ರಯೋಗಿಸಲಾಯಿತು. ಕನ್ನಡಕ ನಾಗರಹಾವು, ಮೊನಾಕಲ್ಡ್ ನಾಗರಹಾವು (Monocled Cobra) ಹಾಗೂ ಎರಡು ಪ್ರಭೇದಗಳ ಕಿಂಗ್ ಕೋಬ್ರಾ ನಾಗರಹಾವುಗಳ ವಿಷವನ್ನು ಇಲಿಗಳಿಗೆ ಚುಚ್ಚಿ ಪರೀಕ್ಷೆ ನಡೆಸಲಾಯಿತು.ಈ ಪ್ರಯೋಗದಲ್ಲಿ ವಿಷ ಚುಚ್ಚಿದ 30 ನಿಮಿಷಗಳ ನಂತರವೂ ಪ್ರತಿಕಾಯಗಳ ಮಿಶ್ರಣವನ್ನು ನೀಡಿದಾಗ, ಪರೀಕ್ಷೆಗೆ ಒಳಪಡಿಸಿದ ಇಲಿಗಳು ಸಾವಿನಿಂದ ಪಾರಾಗಿರುವುದು ಕಂಡುಬಂದಿದೆ. ಇದು ವಿವಿಧ ನಾಗರಹಾವುಗಳ ವಿಷದ ವಿರುದ್ಧ ಹೊಸ ಆಂಟಿವೆನಮ್ ಪರಿಣಾಮಕಾರಿಯಾಗುವ ಸಾಧ್ಯತೆಯನ್ನು ತೋರಿಸಿದೆ.
ಭವಿಷ್ಯದಲ್ಲಿ ಈ ಸಂಶೋಧನೆಯಿಂದ ಏನೆಲ್ಲಾ ಪ್ರಯೋಜನ?
ಈ ಹಿಂದೆ ಹಾವಿನ ವಿಷವನ್ನು ನಿಷ್ಕ್ರಿಯಗೊಳಿಸಲು ಪ್ರತಿಕಾಯಗಳನ್ನು ಬಳಸಿದ ಪ್ರಯೋಗಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳ ಅಗತ್ಯವಿತ್ತು. ಮನುಷ್ಯರ ಚಿಕಿತ್ಸೆಯಲ್ಲೂ ಇದೇ ಪ್ರಮಾಣ ಬೇಕಾದರೆ ದೊಡ್ಡ ಪ್ರಮಾಣದ ಡೋಸ್ ನೀಡಬೇಕಾಗಬಹುದು. ಇದರಿಂದ ಚಿಕಿತ್ಸೆಯ ವೆಚ್ಚ ಮತ್ತು ಸುರಕ್ಷತೆಗೆ ಸಂಬಂಧಿಸಿದ ಆತಂಕಗಳು ಎದುರಾಗುವ ಸಾಧ್ಯತೆಯಿತ್ತು. ಆದರೆ, ಪ್ರಸ್ತುತ ಸಂಶೋಧನೆಯು ಅತ್ಯಂತ ಕಡಿಮೆ ಪ್ರಮಾಣದ, ಸೂಕ್ತವಾಗಿ ಆಯ್ಕೆಮಾಡಿ ವಿನ್ಯಾಸಗೊಳಿಸಿದ ಪ್ರತಿಕಾಯಗಳ ಮೂಲಕವೂ ಹಾವಿನ ವಿಷವನ್ನು ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ತೋರಿಸಿದೆ ಎಂದು ಕಾರ್ತಿಕ್ ಸುನಗರ್ ತಿಳಿಸಿದ್ದಾರೆ.
ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ಪ್ರಮಾಣದ ಪ್ರತಿಕಾಯಗಳನ್ನು ನೀಡುವ ಅಗತ್ಯ ಕಡಿಮೆಯಾಗಬಹುದು. ಪರಿಣಾಮವಾಗಿ ಚಿಕಿತ್ಸೆಯ ವೆಚ್ಚ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿವಾರಿಸುವ ಸಾಧ್ಯತೆಯಿದೆ.
ಅಷ್ಟೇ ಅಲ್ಲ, ಈ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವದ ವಿವಿಧ ಭಾಗಗಳಲ್ಲಿ ಕಂಡುಬರುವ ಹಾವುಗಳ ವಿಷದ ವಿರುದ್ಧವೂ ಪ್ರತ್ಯೇಕ ಆಂಟಿವೆನಮ್ಗಳನ್ನು ಅಭಿವೃದ್ಧಿಪಡಿಸಬಹುದು ಎನ್ನುತ್ತಾರೆ ಸಂಶೋಧಕರು.
ಸದ್ಯಕ್ಕೆ ಈ ಪ್ರಯೋಗಗಳು ಇಲಿಗಳ ಮೇಲೆ ನಡೆದಿದ್ದು, ಮನುಷ್ಯರಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನ ಖಚಿತಪಡಿಸಿಕೊಳ್ಳಲು ಇನ್ನಷ್ಟು ಸಂಶೋಧನೆ ಹಾಗೂ ಕ್ಲಿನಿಕಲ್ ಪ್ರಯೋಗಗಳ ಅಗತ್ಯವಿದೆ. ಆದ್ದರಿಂದ ಇದು ಇನ್ನೂ ಸಾಮಾನ್ಯ ಚಿಕಿತ್ಸೆಗೆ ಲಭ್ಯವಿರುವ ಆಂಟಿವೆನಮ್ ಅಲ್ಲ.
