ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ (Sugar Cane) 5,500 ರೂ. ವೈಜ್ಞಾನಿಕ ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಬಾಗಲಕೋಟೆ(Bagalkote) ಜಿಲ್ಲೆಯಲ್ಲಿ ಅನ್ನದಾತರು ಇಂದು ಮತ್ತೆ ಬೀದಿಗಿಳಿದು ಬೃಹತ್ ಪ್ರತಿಭಟನೆಗೆ(Protest) ಕರೆ ನೀಡಿದ್ದಾರೆ.
ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನೂರಾರು ರೈತರು ಒಗ್ಗೂಡಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು (Hubballi Solapur National Highway) ತಡೆದು ಆಕ್ರೋಶ ಹೊರಹಾಕಲಿದ್ದಾರೆ.
ಬಾಗಲಕೋಟೆ ತಾಲೂಕಿನ ಪ್ರಮುಖ ಸಂಪರ್ಕ ಕೊಂಡಿಯಾದ ಗದ್ದನಕೇರಿ ಕ್ರಾಸ್ ಬಳಿ ಈ ‘ರಸ್ತೆ ರೋಕೋ’ ಚಳವಳಿ ನಡೆಯಲಿದೆ. ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ತಡೆದು ಧರಣಿ ಕುಳಿತುಕೊಳ್ಳಲು ರೈತ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆಯಾಗಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಖರ್ಚು-ವೆಚ್ಚಗಳು ತೀವ್ರವಾಗಿ ಏರಿಕೆಯಾಗಿರುವುದರಿಂದ ಪ್ರಸಕ್ತ ಹಂಗಾಮಿನಲ್ಲಿ ಕಟಾವಾಗುವ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳು ಮತ್ತು ಸರ್ಕಾರ ಕನಿಷ್ಠ 5,500 ರೂ. ದರ ನಿಗದಿಪಡಿಸಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಳಿಕ, ರೈತ ನಿಯೋಗವು ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಮಗ್ರ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಿದೆ. ತಕ್ಷಣವೇ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.
