ಅಗರ್ತಲಾ: ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ ವೇಳೆ ಸ್ಥಳೀಯರು ಮತ್ತು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಈ ಘಟನೆ ತ್ರಿಪುರಾದ ಸೆಪಹಿಜಲಾ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಭಾರತ-ಬಾಂಗ್ಲಾದೇಶ ಗಡಿಯ ಸಮೀಪದ ಅಶಾಬರಿ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಬಿಎಸ್ಎಫ್ನ 49ನೇ ಬೆಟಾಲಿಯನ್ ಸಿಬ್ಬಂದಿ ಕಳ್ಳಸಾಗಣೆ ತಡೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಹೆಫ್ಜುರ್ ರೆಹಮಾನ್ ಎಂಬ ವ್ಯಕ್ತಿಯನ್ನು ಬಿಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಈ ವೇಳೆ ಓರ್ವ ಯೋಧ ಹೆಫ್ಜುರ್ ರೆಹಮಾನ್ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಎಸ್ಎಫ್ ವಾಹನದ ಮೇಲೆ ದಾಳಿ
ಯೋಧನ ವರ್ತನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬಾಕ್ಸಾನಗರ-ರಹಿಂಪುರ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಹಾಯಕ ಕಮಾಂಡೆಂಟ್ ರೋಹಿತ್ ಕುಮಾರ್ ಸೇರಿದಂತೆ ನಾಲ್ವರು ಬಿಎಸ್ಎಫ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ.
🚨 BIG! 8 ARRESTED along the INDIA-BANGLADESH BORDER in Tripura after a violent mob ATTACKED BSF jawans, VANDALISM vehicles, & tried to snatch weapons during an anti-smuggling raid in Boxanagar. FIR registered.
– STRICT ACTION must be taken against every single culprit involved. https://t.co/YNK7mCj32g
— Megh Updates 🚨™ (@MeghUpdates) November 3, 2026
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಕುಮಾರ್ ಮತ್ತು ಅವರ ತಂಡ ಸ್ಥಳಕ್ಕೆ ಬರುತ್ತಿದ್ದಂತೆ ಗುಂಪೊಂದು ಅವರತ್ತ ಧಾವಿಸಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಕೆಲವರು ಬಿದಿರಿನ ಕೋಲುಗಳಿಂದ ಬಿಎಸ್ಎಫ್ ವಾಹನದ ಮೇಲೆ ದಾಳಿ ನಡೆಸಿ, ಮುಂಭಾಗದ ಗಾಜುಗಳನ್ನು ಒಡೆದಿದ್ದಾರೆ. ಈ ವೇಳೆ ತಲೆ ಮತ್ತು ಮೊಣಕಾಲಿಗೆ ಗಾಯಗಳಾಗಿ ರೋಹಿತ್ ಕುಮಾರ್ ನೆಲಕ್ಕೆ ಬಿದ್ದಿರುವ ದೃಶ್ಯವೂ ಸೆರೆಯಾಗಿದೆ.
ಗಾಯಗೊಂಡ ಬಿಎಸ್ಎಫ್ ಸಿಬ್ಬಂದಿಯನ್ನು ಆರಂಭದಲ್ಲಿ ಬಾಕ್ಸಾನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಅವರು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹಲ್ಲೆ ಖಂಡಿಸಿದ ತ್ರಿಪುರಾ ಸಿಎಂ
ಬಿಎಸ್ಎಫ್ ಸಿಬ್ಬಂದಿ ಮೇಲಿನ ಹಲ್ಲೆಯನ್ನು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಖಂಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ನ್ಯಾಯದ ಮುಂದೆ ತರಲಾಗುವುದು. ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಭದ್ರತಾ ಸಿಬ್ಬಂದಿ ವಿರುದ್ಧದ ಹಿಂಸಾಚಾರವನ್ನು ಸಹಿಸುವುದಿಲ್ಲ’ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
In connection with the assault on BSF personnel at Ashabari, Boxanagar, eight accused persons have been arrested. All those involved will be brought to justice, and strict legal action will be taken against them in accordance with the law.
Violence against our security personnel will not be tolerated.
— Prof.(Dr.) Manik Saha (@DrManikSaha2) November 3, 2026
