ಚಿಕ್ಕಬಳ್ಳಾಪುರ/ಬೆಂಗಳೂರು: ಉತ್ತರಾಖಂಡನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನ (Uttarakhand Helicopter Crash) ದುರಂತದಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹಗಳು ಬೆಂಗಳೂರಿಗೆ ಆಗಮಿಸಿವೆ.
ಮೃತಪಟ್ಟ ಐವರ ಪೈಕಿ ನಾಲ್ವರ ಮೃತದೇಹಗಳು ಡೆಹ್ರಾಡೂನ್ನಿಂದ ಇಂಡಿಗೋ ವಿಮಾನದ ಮೂಲಕ ಮೃತದೇಹಗಳನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ತರಲಾಯಿತು.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ಗೆ ಮೃತದೇಹಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸ್ಥಳಕ್ಕೆ ಧಾವಿಸಿ ಅಂತಿಮ ದರ್ಶನಕ್ಕೆ ಕಾಯುತ್ತಿದ್ದರು. ತಮ್ಮವರನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತದೇಹಗಳನ್ನು ಸ್ವೀಕರಿಸಲು ಕುಟುಂಬಸ್ಥರು ಹಾಗೂ ಸ್ನೇಹಿತರು ಕಾರ್ಗೋ ಟರ್ಮಿನಲ್ ಬಳಿ ಬಂದಿದ್ದರು. ಇದೇ ವೇಳೆ ಹೂವಿನ ಹಾರಗಳೊಂದಿಗೆ ಆಗಮಿಸಿದ ದೇವನಹಳ್ಳಿ ತಹಶೀಲ್ದಾರ್ ಅನಿಲ್, ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಿದರು.


