- ಕಬಡ್ಡಿ ಅಖಾಡಕ್ಕಿಳಿದ ಶಿವಲಿಂಗೇಗೌಡ, ರೈಡಿಂಗ್ ಮಾಡಿ ಸೈ ಎಂದ ಡಿಸಿ!
ಹಾಸನ: ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನ ಆರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದೇವಿಯ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದುಕೊಂಡಿದ್ದಾರೆ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ವ್ಯವಸ್ಥೆಯನ್ನು ಪರಿಶೀಲಿಸಿದರು. ಧರ್ಮ ದರ್ಶನ ಸೇರಿದಂತೆ ದೇವಾಲಯದ ವಿವಿಧ ಸರತಿ ಸಾಲುಗಳನ್ನು ವೀಕ್ಷಿಸಿ, ಭಕ್ತರಿಗೆ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.
ಬಳಿಕ ಧರ್ಮ ದರ್ಶನದ ಸರತಿ ಸಾಲಿನ ಪಕ್ಕದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿರುವ ವೇದಿಕೆಗೆ ಆಗಮಿಸಿದ ಸಚಿವರು, ಕನ್ನಡದ ಜನಪ್ರಿಯ ಗೀತೆ ಅಣ್ಣಾವ್ರ ಸಿನಿಮಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಖುಷಿಪಟ್ಟರು. ಸಚಿವರ ನೃತ್ಯ ಕಂಡು ನೆರೆದಿದ್ದ ಭಕ್ತರು ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಈ ವೇಳೆ ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದ ಸಹಸ್ರಾರು ಭಕ್ತರು ಸಚಿವರ ನೃತ್ಯಕ್ಕೆ ಸಾಕ್ಷಿಯಾದರು.
ಅದ್ದೂರಿ ಕ್ರೀಡೋತ್ಸವಕ್ಕೆ ಚಾಲನೆ
ಹಾಸನಾಂಬ ದರ್ಶನೋತ್ಸವದ ಅಂಗವಾಗಿ ಈ ಬಾರಿ ಅದ್ದೂರಿ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ದರ್ಶನೋತ್ಸವದ ಭಾಗವಾಗಿ ರಾಜ್ಯಮಟ್ಟದ ಕುಸ್ತಿ ಹಾಗೂ ಕಬಡ್ಡಿ ಪಂದ್ಯಾವಳಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ರೋಚಕ ನಾಡಕುಸ್ತಿ ಪಂದ್ಯಾವಳಿಯ ಆಯೋಜನೆ ಕ್ರೀಡೋತ್ಸವಕ್ಕೆ ವಿಶೇಷ ಮೆರುಗು ನೀಡಿದೆ. ಇದರ ಜೊತೆಗೆ ಜೋಡೆತ್ತು ಹಾಗೂ ವಿವಿಧ ಜಾನುವಾರುಗಳ ಪ್ರದರ್ಶನವೂ ಕ್ರೀಡೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಸಹಸ್ರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದು, ಮಹಾನಗರ ಪಾಲಿಕೆಯ ವಸ್ತುಪ್ರದರ್ಶನ ಆವರಣದಲ್ಲಿ ಕಾರ್ಯಕ್ರಮಗಳು ಜರುಗುತ್ತಿವೆ.
ಕಬಡ್ಡಿ ಅಖಾಡಕ್ಕಿಳಿದ ಶಿವಲಿಂಗೇಗೌಡ, ರೈಡಿಂಗ್ ಮಾಡಿ ಸೈ ಎಂದ ಡಿಸಿ!
ಹಾಸನಾಂಬ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನೂ ಆಯೋಜಿಸಲಾಗಿದೆ. ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಅಖಾಡಕ್ಕಿಳಿದು ರೈಡ್ ಮಾಡುವ ಮೂಲಕ ಚಾಲನೆ ನೀಡಿದರು. ಇನ್ನು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರೂ ರೈಡರ್ ಆಗಿ ಕಬಡ್ಡಿ ಅಖಾಡಕ್ಕೆ ಇಳಿದು ಆಟಗಾರರಿಗೆ ಪ್ರೋತ್ಸಾಹ ನೀಡಿದರು. ಸಚಿವರು ರೈಡ್ ಮಾಡಿದ ವೇಳೆ ಮೈದಾನದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಶಿಳ್ಳೆ, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

